ADVERTISEMENT

ಕಾಂಬೋಡಿಯಾದ ಕ್ಯಾಸಿನೊದಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 25ಕ್ಕೆ ಏರಿಕೆ

ಏಜೆನ್ಸೀಸ್
Published 30 ಡಿಸೆಂಬರ್ 2022, 14:20 IST
Last Updated 30 ಡಿಸೆಂಬರ್ 2022, 14:20 IST
ಹೋಟೆಲ್‌ನ ಅವಶೇಷಗಳ ಮಧ್ಯದಿಂದ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಶುಕ್ರವಾರ ಹೊರತೆಗೆದರು –ಎಎಫ್‌ಪಿ ಚಿತ್ರ
ಹೋಟೆಲ್‌ನ ಅವಶೇಷಗಳ ಮಧ್ಯದಿಂದ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಶುಕ್ರವಾರ ಹೊರತೆಗೆದರು –ಎಎಫ್‌ಪಿ ಚಿತ್ರ   

ಪುನಾಮ್‌ ಪೆನ್‌: ಗ್ರ್ಯಾಂಡ್‌ ಡೈಮಂಡ್‌ ಸಿಟಿ ಕ್ಯಾಸಿನೊದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವಿಗೀಡಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

‘ಶುಕ್ರವಾರ ಬೆಳಿಗ್ಗೆ ಹೊತ್ತಿಗೆ ಒಟ್ಟು 25 ಮೃತದೇಹಗಳು ದೊರಕಿದ್ದವು.ಕೆಲ ಮೃತದೇಹಗಳು ಕೋಣೆಯೊಳಗೆ, ಇನ್ನೂ ಕೆಲವು ಮೆಟ್ಟಿಲುಗಳ ಹತ್ತಿರ ದೊರಕಿದವು’ ಎಂದು ಪ್ರಾಂತೀಯ ಮಾಹಿತಿ ವಿಭಾಗದ ನಿರ್ದೇಶಕ ಸೆಕ್‌ ಸೊಖೊಂ ಹೇಳಿದರು.

‘ಪತ್ತೆ ಕಾರ್ಯಾಚರಣೆ ಮುಂದುವರೆದಿದೆ. ಮುಚ್ಚಿದ ಕೋಣೆಯೊಳಗೆ, ಕಟ್ಟಡದ ಅವಶೇಷಗಳ ಕೆಳಗೆ ಇನ್ನಷ್ಟು ಮೃತದೇಹಗಳು ಪತ್ತೆಯಾಗಬಹುದು. ಆದ್ದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ’ ಎಂದರು.

ADVERTISEMENT

‘ಹೊಸ ವರ್ಷದ ಸಂಭ್ರಮಾಚರಣೆಗಾಗಿ ಹೋಟೆಲ್‌ಗೆ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು. ಇದಕ್ಕೆ ದೊಡ್ಡ ಪ್ರಮಾಣದ ವಿದ್ಯುತ್‌ ಬಳಕೆಯಾಗುತ್ತಿತ್ತು. ಇದರಿಂದ ತಂತಿಗಳು ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.

‘ಹೋಟೆಲ್‌ ಹಾಗೂ ಕ್ಯಾಸಿನೊ ಸಿಬ್ಬಂದಿ, ಬೆಂಕಿಯನ್ನು ನಂದಿಸಲು ಅಗ್ನಿಶಾಮಕಗಳನ್ನು ಬಳಸಿದರು. ಆದರೆ, ಅದು ನಿರರ್ಥಕವಾಯಿತು. ತುರ್ತು ನಿರ್ಗಮನಕ್ಕಾಗಿ ಜನರೆಲ್ಲರೂ ಓಡುತ್ತಿದ್ದರು. ಜನರು ಭಯಭೀತರಾಗಿದ್ದರು’ ಎಂದರು.

‘ಘಟನೆ ನಡೆದ ದಿನ ಕ್ಯಾಸಿನೊದಲ್ಲಿ 1000 ಗ್ರಾಹಕರು ಬಂದಿದ್ದರು. ಜೊತೆಗೆ 500 ಮಂದಿ ಕ್ಯಾಸಿನೊದ ಸಿಬ್ಬಂದಿ ಇದ್ದರು. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಕ್ಯಾಸಿನೊದಲ್ಲಿ ಎಷ್ಟು ಮಂದಿ ಇದ್ದರು ಮತ್ತು ಎಷ್ಟು ಮಂದಿ ಬೆಂಕಿಯಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಇಲ್ಲ’ ಎಂದು ಕಾಂಬೋಡಿಯಾದ ವಿಪತ್ತು ನಿರ್ವಹಣಾ ಸಮಿತಿಯ ವಕ್ತಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.