ADVERTISEMENT

ಮುಸ್ಲಿಂ ಲೀಗ್ ಪರಿಪೂರ್ಣ ಜಾತ್ಯತೀತ ಪಕ್ಷ: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆ

ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರೊಂದಿಗೆ ಸಂವಾದದಲ್ಲಿ ಹೇಳಿಕೆ

ಐಎಎನ್ಎಸ್
Published 2 ಜೂನ್ 2023, 5:58 IST
Last Updated 2 ಜೂನ್ 2023, 5:58 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ವಾಷಿಂಗ್ಟನ್‌: ‘ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಒಂದು ಪರಿಪೂರ್ಣವಾದ ಜಾತ್ಯಾತೀತ ಪಕ್ಷ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್‌ನ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಅವರು ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ, ಕೇರಳದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಕಾಂಗ್ರೆಸ್‌ ಪಕ್ಷದ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ’ಮುಸ್ಲಿಂ ಲಿಗ್ ಪಕ್ಷದ ಬಗ್ಗೆ ಜಾತ್ಯತೀತ ಅಲ್ಲ ಎನ್ನುವಂತದ್ದು ಏನೂ ಇಲ್ಲ‘ ಎಂದು ಹೇಳಿದರು.

’ಚೀನಾ ಇವರೆಗೂ ತನ್ನ ಒಂದಿಂಚು ಭೂಮಿಯನ್ನೂ ಕಳೆದುಕೊಂಡಿಲ್ಲ. ಆದರೆ ಈ ವಿಷಯ ಕುರಿತು ಪ್ರಧಾನಿ ಮಾತನಾಡುವುದನ್ನು ಬಿಟ್ಟು, ಬೇರೆ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ‘ ಎಂದು ಭಾರತ– ಚೀನಾ ಗಡಿ ವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ADVERTISEMENT

’ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಉತ್ತಮ ಸಾಧನೆ ಮಾಡುತ್ತದೆ ಎಂದು ನಂಬಿದ್ದೇನೆ. ನೋಡುತ್ತಿರಿ, ಆಶ್ಚರ್ಯಕರ ರೀತಿಯಲ್ಲಿ ಪಕ್ಷ ಹೊರಹೊಮ್ಮಲಿದೆ. ನೋಡುತ್ತಿರಿ, ವಿರೋಧ ಪಕ್ಷಗಳ ಒಗ್ಗಟ್ಟು ಬಿಜೆಪಿಯನ್ನು ಸೋಲಿಸಲಿದೆ’ ಎಂದು ಅವರು ಹೇಳಿದರು.

‘ನರೇಂದ್ರ ಮೋದಿ ಅವರು ಭಾರತೀಯ ಸಮಾಜವನ್ನು ಧ್ರುವೀಕರಿಸುತ್ತಿದ್ದಾರೆ ಮತ್ತು ಒಡೆಯುತ್ತಿದ್ದಾರೆ. ಅವರ ಆಡಳಿತದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಅವರು ಆರೋಪಿಸಿದರು.

‘140 ಕೋಟಿ ಜನರಿರುವ, ವಿವಿಧ ನಂಬಿಕೆಗಳ, ಜಾತ್ಯತೀತ ಸಂವಿಧಾನದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಜೂನ್ 22ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಕೈಗೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.