ADVERTISEMENT

ವೈರಲ್ ಆಯ್ತು ಜನಾಂಗೀಯ ನಿಂದನೆ ವಿರುದ್ಧ ಬ್ರಿಟನ್‌ ವೈದ್ಯೆಯ ಟ್ವೀಟ್

ಆರೋಗ್ಯ ತಪಾಸಣೆಗೆ ಬಂದ ರೋಗಿಯಿಂದಲೇ ನಿಂದನೆ *ಮನದಾಳ ಬಿಚ್ಚಿಟ್ಟ ಡಾ. ಪೂನಮ್ ಕ್ರಿಶನ್

ಏಜೆನ್ಸೀಸ್
Published 23 ಜನವರಿ 2019, 12:30 IST
Last Updated 23 ಜನವರಿ 2019, 12:30 IST
ಡಾ. ಪೂನಮ್ ಕ್ರಿಶನ್
ಡಾ. ಪೂನಮ್ ಕ್ರಿಶನ್   

ಲಂಡನ್: ಸಾವಿನ ಅಂಚಿನಲ್ಲಿರುವ ವ್ಯಕ್ತಿಯ ಉಸಿರಾಟದಲ್ಲಿ ನಾವು ಬೇಧ ಕಾಣಲು ಸಾಧ್ಯವೇ? ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ವ್ಯಕ್ತಿಗಳಿಗೆ ನೀಡುವ ಚಿಕಿತ್ಸೆ ಒಂದೇ ರೀತಿಯದ್ದಲ್ಲವೇ? ವೈದ್ಯರಾಗಿ ನಾವು ಅವರನ್ನು ಚರ್ಮದ ಬಣ್ಣ, ಧರ್ಮ ಅಥವಾ ಇನ್ಯಾವುದೇ ತಾರತಮ್ಯದಿಂದ ಕಾಣಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ನಮ್ಮ ರೋಗಿಗಳಿಗೆ ಯಾವುದೇ ತಾರತಮ್ಯ ಮಾಡದೆ ಉತ್ತಮ ಸೇವೆ ನೀಡುತ್ತೇವೆ ಎಂದೇ ನಾವು ಪ್ರತಿಜ್ಞಾವಿಧಿ ಸ್ವೀಕರಿಸಿರುತ್ತೇವೆ. ರೋಗಿಗಳಿಗೆ ಅದಕ್ಕೆ ಅವಕಾಶವಿರಬಹುದು. ಆದರೆ, ತಮ್ಮನ್ನು ಕಾಳಜಿಯಿಂದ ಕಾಣುವ ವೈದ್ಯರಿಗೂ ಅದೇ ಪ್ರೀತಿಯನ್ನು ತೋರುವ ಜವಾಬ್ದಾರಿ ಅವರಿಗೂ (ರೋಗಿಗಳಿಗೂ) ಇದೆಯಲ್ಲವೇ? ಹೀಗೆಂದು ಜನಾಂಗೀಯ ನಿಂದನೆ ಬಗ್ಗೆ ನೋವಿನಿಂದ ಪ್ರಶ್ನಿಸಿದವರು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಗಳ ಇಲಾಖೆಯಲ್ಲಿ (ಎನ್‌ಎಚ್‌ಎಸ್) ಸೇವೆ ಸಲ್ಲಿಸುತ್ತಿರುವ ವೈದ್ಯೆಡಾ. ಪೂನಮ್ ಕ್ರಿಶನ್.

ತಮಗಾದ ಜನಾಂಗೀಯ ನಿಂದನೆ ಅನುಭವವನ್ನು ಅವರು ಟ್ವೀಟ್ ಮಾಡಿದ್ದು, ಅದೀಗ ವೈರಲ್ ಆಗಿದೆ.

ಪೂನ್ ಹೇಳಿದ್ದೇನು?

ADVERTISEMENT

‘ನಾನು ಗ್ಲಾಸ್ಗೋದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ ವಾರ ರಿಸೆಪ್ಷನ್‌ ಕೌಂಟರ್ ಬಳಿ ಸಾಗುತ್ತಿದ್ದಾಗ ಒಬ್ಬ ರೋಗಿ ನನ್ನನ್ನು ನೋಡಿದರು. ನಂತರ ಸ್ವಾಗತಕಾರಿಣಿ (ರಿಸೆಪ್ಷನಿಸ್ಟ್) ಬಳಿ ಅವರು ನಡೆಸಿದ ಸಂಭಾಷಣೆ ಹೀಗಿದೆ:

ರೋಗಿ: ‘ವೈದ್ಯರನ್ನು ಭೇಟಿಯಾಗಲು ಅನುಮತಿ ಬೇಕಿದೆ. ಆದರೆ, ಏಷ್ಯಾದ ವೈದ್ಯರದ್ದು ಬೇಡ’

ರಿಸೆಪ್ಷನಿಸ್ಟ್: ‘ಅವರು ಸ್ಕಾಟ್ಲೆಂಡ್‌ನವರು’

ರೋಗಿ: ‘ಅವರು ಸ್ಕಾಟ್ಲೆಂಡ್‌ನವರ ರೀತಿ ಇಲ್ಲವಲ್ಲ’

ರಿಸೆಪ್ಷನಿಸ್ಟ್: ‘ಸ್ಕಾಟ್ಲೆಂಡ್‌ನವರು ನೋಡಲು ಹೇಗಿರುತ್ತಾರೆ?’...

ಇಷ್ಟು ಕೇಳಿಸಿಕೊಂಡ ಬಳಿಕ ನಾನಲ್ಲಿಂದ ತೆರಳಿದೆ. ಆ ಮೇಲೆ ಘಟನೆ ಬಗ್ಗೆರಿಸೆಪ್ಷನಿಸ್ಟ್ ನನಗೆ ಮಾಹಿತಿ ನೀಡಿದರು. ಬ್ರಿಟನ್‌ನ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಈ ಹಿಂದೆಯೂ ಇಂತಹ ಘಟನೆಗಳನ್ನು ನೋಡಿ ತಿಳಿದಿರುವೆ. ಆದರೆ, ಈ ಬಾರಿ ಒಮ್ಮೆ ಬಹಳ ಬೇಸರವಾಯಿತು. ಹಾಗೆಯೇ ಈವರೆಗೂ ಇಂತಹ ಅನುಭವ ಆಗಿಲ್ಲವಲ್ಲ ಎಂದು ಸಮಾಧಾನವೂ ಆಯಿತು.ಇಂತಹ ತಾರತಮ್ಯದ ವಿರುದ್ಧ ಏನಾದರೂ ಮಾಡಬೇಕು ಅಂದುಕೊಂಡು ರೋಗಿ ಮತ್ತುರಿಸೆಪ್ಷನಿಸ್ಟ್ ನಡುವಣ ಸಂಭಾಷಣೆಯನ್ನು ಟ್ವೀಟ್ ಮಾಡಿದೆ. ಇದಕ್ಕೆ ಬಹಳ ಉತ್ತಮ ರೀತಿಯ ಸ್ಪಂದನೆ ವ್ಯಕ್ತವಾಗಿದೆ. ಟ್ವೀಟ್‌ಗೆ ಬಂದ ಬಹುತೇಕ ಪ್ರತಿಕ್ರಿಯೆಗಳು ಧನಾತ್ಮಕವಾಗಿಯೇ ಇದ್ದವು. ಅನೇಕರು ಮೆಸೇಜ್, ಇ–ಮೇಲ್‌ಗಳ ಮೂಲಕವೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವೇ ಕೆಲವು ಸಂಖ್ಯೆಯ ಜನ ನನ್ನನ್ನು ಟ್ರೋಲ್ ಮಾಡಿದ್ದಲ್ಲದೆ ನಿಂದಿಸಿದ್ದಾರೆ. ಇಂತಹ ಸಮಸ್ಯೆಗಳನ್ನು ನಿವಾರಿಸಬೇಕಾದ ಅಗತ್ಯವಿದೆ’ ಎಂದು ಪೂನಮ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಮಾಡಿರುವ ಟ್ವೀಟ್‌ ಅನ್ನು ಈವರೆಗೆ 95,000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. 17,000ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದು, 2,400ಕ್ಕೂ ಹೆಚ್ಚು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.