ADVERTISEMENT

ಮ್ಯಾನ್ಮಾರ್‌: ಎನ್‌ಎಲ್‌ಡಿ ಪಕ್ಷದ ಹಿರಿಯ ನಾಯಕರ ಬಂಧನ

ಮಿಲಿಟರಿ ಆಡಳಿತ ವಿರೋಧಿಸಿ, ಅಸಹಕಾರ ಚಳವಳಿಗೆ ಕರೆ ನೀಡಿದ ಕಾರಣ

ಏಜೆನ್ಸೀಸ್
Published 5 ಫೆಬ್ರುವರಿ 2021, 6:47 IST
Last Updated 5 ಫೆಬ್ರುವರಿ 2021, 6:47 IST
ವಿನ್‌ ಹಟೈನ್
ವಿನ್‌ ಹಟೈನ್   

ಯಾಂಗೂನ್: ಮಿಲಿಟರಿ ಆಡಳಿತ ವಿರೋಧಿಸಿ, ಸಾರ್ವಜನಿಕವಾಗಿ ಅಸಹಕಾರ ಚಳವಳಿಗೆ ಕರೆ ನೀಡಿದ್ದ ಪದಚ್ಯುತ ಆಡಳಿತ ‍ಪಕ್ಷ ನ್ಯಾಷನಲ್‌ ಲೀಗ್‌ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ)ಯ ಹಿರಿಯ ಸದಸ್ಯ ವಿನ್‌ ಹಟೈನ್ (79) ಅವರನ್ನು ಸೋಮವಾರ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ಬಂಧಿಸಿದೆ.

‘ಎನ್‌ಎಲ್‌ಡಿಪಿ ನಾಯಕಿ ಆಂಗ್‌ ಸಾನ್ ಸೂ ಕಿ ಅವರ ದೀರ್ಘಕಾಲದ ಒಡನಾಡಿ ವಿನ್ ಹಟೈನ್‌ರನ್ನು ಯಾಂಗೂನ್‌ನಲ್ಲಿರುವ ಅವರ ಮನೆಯಲ್ಲೇ ಸೋಮವಾರ ಬಂಧಿಸಿ, ರಾಜಧಾನಿ ನಯ್ಪಯ್ಟವ್‌ಗೆ ಕರೆದೊಯ್ಯಲಾಯಿತು‘ ಎಂದು ಎನ್‌ಎಲ್‌ಡಿಪಿ ಪಕ್ಷದ ವಕ್ತಾರ ಕೀ ತೊಯೆ ಶುಕ್ರವಾರ ತಿಳಿಸಿದರು.

ರಾಜಕೀಯ ಕೈದಿಗಳ ಸಹಾಯ ಸಂಘದ ಪ್ರಕಾರ, ‘ಇಲ್ಲಿವರೆಗೆ ಕನಿಷ್ಠ 133 ಶಾಸಕರು ಮತ್ತು 14 ನಾಗರಿಕ ಸೇವಾ ಕಾರ್ಯಕರ್ತರನ್ನು ಮಿಲಿಟರಿ ವಶಕ್ಕೆ ಪಡೆದಿದೆ.

ADVERTISEMENT

‘ಆಂಗ್‌ ಸಾನ್ ಸೂ ಕಿ ಮತ್ತು ಪದಚ್ಯುತ ಅಧ್ಯಕ್ಷ ವಿನ್ ಮಿಂಟ್‌ ಅವರನ್ನು ಫೆಬ್ರುವರಿ ಮಧ್ಯ ಭಾಗದವರಗೆಗೂ ಬಂಧನದಲ್ಲಿರಿಸಲಾಗುತ್ತದೆ‘ ಎಂದು ಎನ್‌ಎಲ್‌ಡಿಪಿ ತಿಳಿಸಿದೆ.

ಈ ಮಧ್ಯೆ ಬಿಬಿಸಿ ರೇಡಿಯೊದೊಂದಿಗೆ ಶುಕ್ರವಾರ ಮುಂಜಾನೆ ಮಾತನಾಡಿದ ವಿನ್ ಹಟೈನ್ ಅವರು, ‘ನನ್ನನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಲಾಗಿದೆ. ಇದು ಜೀವಾವಧಿ ಶಿಕ್ಷೆ ನೀಡುವಂತಹ ಆರೋಪವಾಗಿದೆ‘ ಎಂದು ಹೇಳಿದ್ದಾರೆ.

‘ನಾನು ಮಾತನಾಡುತ್ತಿರುವುದು ಅವರಿಗೆ ಇಷ್ಟವಿಲ್ಲ. ನಾನು ಮಾತನಾಡುವ ವಿಷಯ ಅವರಿಗೆ ಹೆದರಿಕೆ ಉಂಟು ಮಾಡುತ್ತಿದೆ‘ ಎಂದು ಅವರು ಬಿಬಿಸಿಗೆ ತಿಳಿಸಿದರು.

ಮಿಲಿಟರಿ ಸರ್ಕಾರ ಪ್ರತಿಭಟನೆಗಳನ್ನು ತಡೆಯುವುದಕ್ಕಾಗಿ ಗುರುವಾರ ಬೆಳಿಗ್ಗೆಯಿಂದಲೇ ಫೇಸ್‌ಬುಕ್‌ ಜಾಲತಾಣವನ್ನು ನಿರ್ಬಂಧಿಸಿತ್ತು. ಮ್ಯಾನ್ಮಾರ್‌ನಲ್ಲಿ ಇಂಟರ್ನೆಟ್‌ ಹೊಂದಿರುವ ಬಹುತೇಕರು ಈ ಫೇಸ್‌ಬುಕ್ ಬಳಸುವ ಕಾರಣ, ಈ ಕ್ರಮ ಕೈಗೊಳ್ಳಲಾಗಿತ್ತು. ಫೇಸ್‌ಬುಕ್‌ ತಡೆಯನ್ನು ತೆರವುಗೊಳಿಸಲು ಜಾಲತಾಣ ಕಂಪನಿ ಸರ್ಕಾರವನ್ನು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.