ADVERTISEMENT

ಯುವಕರಿಗೆ ಕಡ್ಡಾಯ ಮಿಲಿಟರಿ ಸೇವೆ; ಕಾನೂನು ಜಾರಿಗೆ ಮುಂದಾದ ಮ್ಯಾನ್ಮಾರ್ ಸೇನಾಡಳಿತ

ರಾಯಿಟರ್ಸ್
Published 14 ಫೆಬ್ರುವರಿ 2024, 6:32 IST
Last Updated 14 ಫೆಬ್ರುವರಿ 2024, 6:32 IST
<div class="paragraphs"><p>ಮ್ಯಾನ್ಮಾರ್ ಸೇನಾ ಸಿಬ್ಬಂದಿ</p></div>

ಮ್ಯಾನ್ಮಾರ್ ಸೇನಾ ಸಿಬ್ಬಂದಿ

   

ರಾಯಿಟರ್ಸ್

ಬರ್ಮಾ: ಆಡಳಿತ ವಿರೋಧಿ ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಯುವ ಜನರನ್ನು ಏಪ್ರಿಲ್‌ನಿಂದ ಕಡ್ಡಾಯವಾಗಿ ಸೇನೆಗೆ ನೇಮಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯ ಅಗತ್ಯವೂ ಇದೆ ಎಂದು ಮ್ಯಾನ್ಮಾರ್‌ ಸೇನಾಡಳಿತದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

2021ರಲ್ಲಿ ಚುನಾಯಿತ ಸರ್ಕಾರದಿಂದ ಸೇನೆಯು ಅಧಿಕಾರ ಕಸಿದುಕೊಂಡ ಬಳಿಕ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಇದೀಗ ಹೆಚ್ಚಿನ ಜನರನ್ನು ಸೇವೆಗೆ ಕರೆಸಿಕೊಳ್ಳಲು ಯೋಜಿಸಿರುವುದು ಸೇನಾಡಳಿತ ಒತ್ತಡದಲ್ಲಿದೆ ಎಂಬುದನ್ನು ಸೂಚಿಸುತ್ತದೆ.

18ರಿಂದ 35 ವಯಸ್ಸಿನ ಪುರುಷರು ಮತ್ತು 18ರಿಂದ 27 ವಯಸ್ಸಿನ ಮಹಿಳೆಯರು ಎರಡು ವರ್ಷದವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಮ್ಯಾನ್ಮಾರ್ ಆಡಳಿತ ಕಳೆದವಾರ ಘೋಷಿಸಿದೆ. ಇದು ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಮಂಗಳವಾರ ತಿಳಿಸಿದೆ.

'ಕಡ್ಡಾಯ ಸೇನಾ ಭರ್ತಿಯನ್ನು ಏಪ್ರಿಲ್‌ನಿಂದ ಆರಂಭಿಸಲು ಕಾರ್ಯಪ್ರವೃತ್ತರಾಗಿದ್ದೇವೆ' ಎಂದು ಸೇನಾಡಳಿತದ ವಕ್ತಾರ ಜಾ ಮಿನ್‌ ತುನ್‌ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ. ಈ ಬಗ್ಗೆ ಅವರು ಹೆಚ್ಚಿನ ವಿವರ ನೀಡಿಲ್ಲ. ಆದರೆ, ಕಳೆದ ಐದು ವರ್ಷಗಳಲ್ಲಿ ನಿವೃತ್ತರಾಗಿರುವವರೂ ಸೇವೆಗೆ ವಾಪಸ್‌ ಆಗುವಂತೆ ತುನ್‌ ತಿಳಿಸಿರುವುದಾಗಿ ಸರ್ಕಾರಿ ಮಾಧ್ಯಮ 'ಎಂಆರ್‌ಟಿವಿ' ಸುದ್ದಿ ಮಾಡಿದೆ.

ಎಷ್ಟು ಜನರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ತುನ್‌ ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಅಗತ್ಯವಿರುವಷ್ಟು ಜನರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು 'ಎಂಆರ್‌ಟಿವಿ' ತಿಳಿಸಿದೆ.

ಸೇನಾಡಳಿತವು ತನ್ನ ಸೇನಾ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ದಕ್ಷಿಣ ಏಷ್ಯಾದ ವಿಶ್ಲೇಷಕರು ಮತ್ತು ರಾಜತಾಂತ್ರಿಕರು, ಮ್ಯಾನ್ಮಾರ್‌ ಆಡಳಿತವು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಹಾಗಾಗಿ ಸೇನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದೆ ಎಂದು ಅಂದಾಜಿಸಿದ್ದಾರೆ.

ಇದೇ ರೀತಿಯ ಕಡ್ಡಾಯ ಕಾನೂನನ್ನು 2010ರಲ್ಲಿಯೂ ಪರಿಚಯಿಸಲಾಗಿತ್ತು. ಆದರೆ, ಅದು ಜಾರಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.