ADVERTISEMENT

ಮ್ಯಾನ್ಮಾರ್‌ನ ಸೂಕಿ ಗೋಪ್ಯ ಸ್ಥಳದಿಂದ ಕಾರಾಗೃಹಕ್ಕೆ ಸ್ಥಳಾಂತರ

ಪಿಟಿಐ
Published 23 ಜೂನ್ 2022, 13:13 IST
Last Updated 23 ಜೂನ್ 2022, 13:13 IST
ಆಂಗ್ ಸಾನ್ ಸೂಕಿ
ಆಂಗ್ ಸಾನ್ ಸೂಕಿ   

ಬ್ಯಾಂಕಾಕ್: ಈವರೆಗೆ ಗೋಪ್ಯ ಕಾರಾಗೃಹದಲ್ಲಿ ಇರಿಸಲಾಗಿದ್ದ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಪಕ್ಷದ ನಾಯಕಿ ಆಂಗ್‌ ಸಾನ್‌ ಸೂಕಿ ಅವರನ್ನು ಇದೀಗ ಮ್ಯಾನ್ಮಾರ್ ರಾಜಧಾನಿ ನಾಯ್‌ಪೀಡಾ ನಗರದ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕಾನೂನು ಅಧಿಕಾರಿಗಳು ತಿಳಿಸಿದ್ದಾರೆ.

ಅವರ ವಿರುದ್ಧದ ಕೋರ್ಟ್ ಪ್ರಕರಣಗಳ ವಿಚಾರಣೆಯು ಕಾರಾಗೃಹ ಆವರಣದಲ್ಲಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಸೂಕಿ ಅವರ ಸರ್ಕಾರವನ್ನು 2021ರ ಫೆಬ್ರುವರಿ 1ರಂದು ಸೇನೆ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ಬಳಿಕ ಸೂಕಿ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸೇನೆ ವಶಕ್ಕೆ ಪಡೆದಿತ್ತು.

ವಾಕಿ-ಟಾಕಿಗಳ ಅಕ್ರಮ ಆಮದು ಮತ್ತು ಬಳಕೆ ಹಾಗೂ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಪ್ರಕರಣದಲ್ಲಿ ದೋಷಿಯಾಗಿರುವ ಸೂಕಿ ಅವರಿಗೆ ಈಗಾಗಲೇ 11 ವರ್ಷಗಳ ಕಾರಾಗೃಹ ಶಿಕ್ಷೆಗೆ ವಿಧಿಸಲಾಗಿದೆ. ಅಲ್ಲದೆ, ಭ್ರಷ್ಟಾಚಾರ ಮತ್ತು ಚುನಾವಣೆ ಅಕ್ರಮ ಹಾಗೂ ಅಧಿಕಾರಿಗಳ ರಹಸ್ಯ ಕಾಯ್ದೆ ಉಲ್ಲಂಘನೆ ಆರೋಪಗಳು ಅವರ ಮೇಲೆ ಹೊರಿಸಲಾಗಿದೆ.

ADVERTISEMENT

ಆದರೆ, ಸೂಕಿ ಬೆಂಬಲಿಗರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಸೂಕಿ ಅವರ ಮೇಲಿನ ಆರೋಪಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.