ADVERTISEMENT

ಉತ್ತರ ಕೊರಿಯಾ: ಕೋವಿಡ್‌ ವ್ಯಾಪಕವಾಗಿ ಹರಡಿರುವ ಶಂಕೆ

ಅಧಿಕಾರಿಗಳಿಗೆ ಕಿಮ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಮೇ 2022, 15:36 IST
Last Updated 18 ಮೇ 2022, 15:36 IST

ಸೋಲ್‌(ಎಪಿ): ಉತ್ತರ ಕೊರಿಯಾದಲ್ಲಿ ದಿನೇ ದಿನೇ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ. ಬುಧವಾರ ಹೊಸದಾಗಿ 2,32,880 ಜನರಲ್ಲಿ ಜ್ವರ ಕಾಣಿಸಿಕೊಂಡಿದ್ದು ಆರು ಮಂದಿ ಮೃತಪಟ್ಟಿದ್ದಾರೆ.

ದೇಶದಾದ್ಯಂತ ಸೋಂಕು ಉಲ್ಬಣಿಸುತ್ತಿರುವುದಕ್ಕೆ ಅಧಿಕಾರಿಗಳ ಅಪ್ರಬುದ್ಧತೆ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ದೂರಿರುವ ದೇಶದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಇಲ್ಲಿಯವರೆಗೆ 17 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 62 ಜನರು ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ಚೇತರಿಸಿಕೊಂಡಿದ್ದಾರೆ. 6,91,170 ಜನರು ಚಿಕಿತ್ಸೆಗಾಗಿ ಪ್ರತ್ಯೇಕವಾಗಿದ್ದಾರೆ ಎಂದು ದೇಶದ ವೈರಾಣು ನಿರೋಧಕ ಕೇಂದ್ರಗಳ ಪ್ರಧಾನ ಕಚೇರಿ ಹೇಳಿದೆ.

ADVERTISEMENT

ಉತ್ತರ ಕೊರಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರ ಪ್ರಕರಣಗಳು ಕೋವಿಡ್‌ ಸೋಂಕು ಆಗಿರಬಹುದು ಎಂದು ಇತರೆ ದೇಶಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಳೆದ ವಾರ ಓಮೈಕ್ರಾನ್‌ ಸೋಂಕು ಕಾಣಿಸಿಕೊಂಡ ಬಳಿಕ ಕೆಲವೇ ಕೆಲವು ಪ್ರಕರಣಗಳನ್ನು ಮಾತ್ರ ಆ ದೇಶ ದೃಢಪಡಿಸಿದೆ. ಸೋಂಕು ಪತ್ತೆ ಪರೀಕ್ಷೆ ಸಾಮಾಗ್ರಿ ಮತ್ತು ರೋಗಿಗಳ ಮೇಲ್ವಿಚಾರಣೆಗೆ ಸಾಕಷ್ಟು ಸಂಪನ್ಮೂಲ ಕೊರತೆಯಿಂದ ಎಷ್ಟು ಮಂದಿಗೆ ಸೋಂಕು ವ್ಯಾಪಿಸಿದೆ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಡಬ್ಲ್ಯುಎಚ್‌ಒ ಕಳವಳ: ಕೋವಿಡ್‌ನಿಂದ ಲಕ್ಷಾಂತರ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿದೆ. ಆದರೆ, ಕೋವಿಡ್‌ ದತ್ತಾಂಶವನ್ನು ಮುಚ್ಚಿಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಮತ್ತು ಜಾಗತಿಕ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

‘ಉತ್ತರ ಕೊರಿಯಾದಲ್ಲಿ ಸೋಂಕು ಹರಡುತ್ತಿರುವ ಬಗ್ಗೆ ಡಬ್ಲ್ಯುಎಚ್‌ಒ ತೀವ್ರ ಕಳವಳ ವ್ಯಕ್ತಪಡಿಸಿದೆ. ಮತ್ತಷ್ಟು ಜನರಿಗೆ ಸೋಂಕು ಹರಡುವ ಆತಂಕವಿದೆ. ಕೋವಿಡ್‌ ಹರಡುವಿಕೆ ಬಗ್ಗೆ ಮಾಹಿತಿ ನೀಡಲು ಕೋರಿದ ನಮ್ಮ ಮನವಿಗೆ ಆ ದೇಶ ಪ್ರತಿಕ್ರಿಯಿಸಿಲ್ಲ ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

‘ಉತ್ತರ ಕೊರಿಯಾದಲ್ಲಿ ಸೋಂಕು ಹರಡುತ್ತಿರುವ ರೀತಿ ನೋಡಿದರೆ ಹೊಸ ರೂಪಾಂತರಿ ಸೃಷ್ಟಿಗೆ ದಾರಿಯಾಗಬಹುದು. ಆ ದೇಶ ನೆರವು ಕೋರುವವರೆಗೂ ನಾವು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಡಬ್ಲ್ಯುಎಚ್‌ಒ ತುರ್ತು ವಿಭಾಗದ ಮುಖ್ಯಸ್ಥ ಡಾ.ಮೈಕಲ್ ರಯಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.