ADVERTISEMENT

ಬೈರೂತ್ ಸ್ಫೋಟ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ

ಬಂದರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಸಿಬ್ಬಂದಿಗೆ ಗೃಹ ಬಂಧನ

ಏಜೆನ್ಸೀಸ್
Published 6 ಆಗಸ್ಟ್ 2020, 20:14 IST
Last Updated 6 ಆಗಸ್ಟ್ 2020, 20:14 IST
ಬೈರೂತ್‌ ಬಂದರ್‌ ಸಮೀಪದ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ
ಬೈರೂತ್‌ ಬಂದರ್‌ ಸಮೀಪದ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ   

ಬೈರೂತ್: ನಗರದ ಗೋದಾಮಿನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಸಿಬ್ಬಂದಿಯನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದ್ದು, ಗೋದಾಮು ನಿರ್ವಹಣೆಯಲ್ಲಿ ನಿರ್ಲಕ್ಷ್ಯವಹಿಸಿರುವ ಸಾಧ್ಯತೆಯ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರಸಗೊಬ್ಬರಕ್ಕೆ ಬಳಸುವ ಸ್ಫೋಟಕದಂತಹ ರಾಸಾಯನಿಕ ವಸ್ತುಗಳನ್ನು ಇಷ್ಟು ವರ್ಷ ಏಕೆ ಮತ್ತು ಹೇಗೆ ಸಂಗ್ರಹಿಸಿದ್ದರು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

‘ಬೈರೂತ್ ಬಂದರ್‌ನಲ್ಲಿರುವ ಕಸ್ಟಮ್ಸ್‌ ಅಧಿಕಾರಿಗಳು ಕಡು ಭ್ರಷ್ಟರಾಗಿದ್ದಾರೆ. ಇಲ್ಲಿನ ಬಂದರು ಮತ್ತು ಕಸ್ಟಮ್ಸ್‌ ಕಚೇರಿ ಲೆಬನಾನ್‌ನಲ್ಲೇ ಅತ್ಯಂತ ಭ್ರಷ್ಟ ಸಂಸ್ಥೆಯಾಗಿದೆ. ಇಲ್ಲಿನ ಅಧಿಕಾರಿಗಳ ಅಸಮರ್ಪಕ ನಿರ್ವಹಣೆ ಮತ್ತು ನಿರ್ಲಕ್ಷ್ಯತನದಿಂದಲೇ ಈ ಸ್ಫೋಟ ಸಂಭವಿಸಿದೆ’ ಎಂದು ಸಾರ್ವಜನಿಕರು ಇಲ್ಲಿನ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಸುಮಾರು ಆರು ವರ್ಷಗಳಿಂದಇಲ್ಲಿನ ಬಂದರ್‌ನ ಗೋದಾಮಿನಲ್ಲಿ ದಾಸ್ತಾನುಮಾಡಿದ್ದ 2 ಸಾವಿರ ಟನ್‌ನಷ್ಟು ಅಮೋನಿಯಂ ನೈಟ್ರೇಟ್‌ ಸ್ಫೋಟಗೊಂಡಿದೆ. ಪರಿಣಾಮವಾಗಿ 135 ಮಂದಿ ಸಾವನ್ನಪ್ಪಿದ್ದು, 5ಸಾವಿರ ಮಂದಿ ಗಾಯಗೊಂಡಿದ್ದಾರೆ. ಅಂದಾಜು 15 ಬಿಲಿಯನ್ ಡಾಲರ್‌ನಷ್ಟು ನಷ್ಟ ಸಂಭವಿಸಿದೆ. 3 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಬೈರೂತ್ ರಾಜ್ಯಪಾಲ ಅಬ್ಬೌಡ್‌ ಸ್ಥಳೀಯ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

’ಈ ಸ್ಫೋಟದಿಂದಾಗಿ ಬೈರೂತ್‌ ನಗರ ಅಕ್ಷರಶಃ ನರಕದಂತಾಗಿದೆ. ಪುನರ್‌ನಿರ್ಮಾಡಲು ಸಾಧ್ಯವಿಲ್ಲವೆನ್ನಷ್ಟು ನಗರ ಹಾಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ’ ಎಂದು ಇಲ್ಲಿನ ಶೋರೂಮ್‌ವೊಂದರ ಪ್ರಸಿದ್ಧ ಡಿಸೈನರ್‌ ಆಮಿ ಆರೋಪಿಸುತ್ತಾರೆ.

ಉದ್ದೇಶಪೂರ್ವಕ ದಾಳಿಯೇ: ಟ್ರಂಪ್

‘ವಾಷಿಂಗ್ಟನ್(ಎಪಿ): ಸಂಭ ವಿಸಿರುವ ಸ್ಫೋಟ ಉದ್ದೇಶಪೂರ್ವಕ ದಾಳಿ ನಡೆದಿರುವ ಸಾಧ್ಯತೆ ಇದೆ ಎಂಬ ಶಂಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ದಾಳಿ ಉದ್ದೇಶವಿಲ್ಲ, ರಾಸಾಯನಿಕ ಸ್ಫೋಟದಿಂದಲೇ ಸಂಭವಿಸಿರುವುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಫಷ್ಟಪಡಿಸಿದ ನಂತರವೂ, ಟ್ರಂಪ್ ’ಈ ಘಟನೆ ಉದ್ದೇಶಪೂರ್ವಕ ದಾಳಿ ಯಾಗಿರುವ ಸಾಧ್ಯತೆ ಇದೆ’ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

’ಇಷ್ಟಕ್ಕೂ ಈ ದೊಡ್ಡ ಘಟನೆ ಯನ್ನು ನೀವು ಆಕಸ್ಮಿಕ ಎಂದು ಹೇಗೆ ನಂಬುತ್ತೀರಿ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.