ADVERTISEMENT

’ನೇಪಾಳ: ಹಿಂಸಾಚಾರ ಪೂರ್ವನಿಯೋಜಿತ‘– ಪ್ರಧಾನಿ  ಸುಶೀಲಾ ಕಾರ್ಕಿ

ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ: ಪ್ರಧಾನಿ  ಸುಶೀಲಾ ಕಾರ್ಕಿ

ಏಜೆನ್ಸೀಸ್
Published 14 ಸೆಪ್ಟೆಂಬರ್ 2025, 14:58 IST
Last Updated 14 ಸೆಪ್ಟೆಂಬರ್ 2025, 14:58 IST
ಪ್ರತಿಭಟನೆ ವೇಳೆ ಮೃತಪಟ್ಟ ಹೋರಾಟಗಾರರಿಗೆ ಪ್ರಧಾನಿ ಕಾರ್ಕಿ ನೇತೃತ್ವದ ಸಭೆಯಲ್ಲಿ ಮೌನಾಚರಣೆ ಮೂಲಕ ಸಂತಾಪ ಸಲ್ಲಿಸಲಾಯಿತು– ಎಎಫ್‌ಪಿ ಚಿತ್ರ
ಪ್ರತಿಭಟನೆ ವೇಳೆ ಮೃತಪಟ್ಟ ಹೋರಾಟಗಾರರಿಗೆ ಪ್ರಧಾನಿ ಕಾರ್ಕಿ ನೇತೃತ್ವದ ಸಭೆಯಲ್ಲಿ ಮೌನಾಚರಣೆ ಮೂಲಕ ಸಂತಾಪ ಸಲ್ಲಿಸಲಾಯಿತು– ಎಎಫ್‌ಪಿ ಚಿತ್ರ   

ಕಠ್ಮಂಡು: ನೇಪಾಳದಲ್ಲಿ ನಡೆದ 'ಜೆನ್–ಝೀ' ಹೋರಾಟದ ವೇಳೆ ಹಿಂಸಾಚಾರ ಕೃತ್ಯಗಳ‌ಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಅವರು ಭಾನುವಾರ ಘೋಷಿಸಿದ್ದಾರೆ. 

ಭಾನುವಾರ ಸಿಂಘ ದರ್ಬಾರ್‌ ಸಂಕೀರ್ಣದಲ್ಲಿರುವ ನೂತನ ಗೃಹ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ’ಸೆಪ್ಟೆಂಬರ್‌ 9ರಂದು ನಡೆದ ಹಿಂಸಾಚಾರವು ಪೂರ್ವನಿಯೋಜಿತವಾಗಿದ್ದು, ವ್ಯವಸ್ಥಿತವಾಗಿ ಕೈಗೊಳ್ಳಲಾಗಿದೆ.  ಜೆನ್‌–ಝೀ ‍ಪ್ರತಿಭಟನಕಾರರು  ಹಿಂಸಾಚಾರದ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಹಿಂಸಾಚಾರಕ್ಕೆ ಕಾರಣವಾದವರಿಗೆ ಶಿಕ್ಷೆಯಾಗಬೇಕು‘ ಎಂದೂ ಪ್ರತಿಪಾದಿಸಿದ್ದಾರೆ. 

ಕಾರ್ಯದರ್ಶಿಗಳು, ಸರ್ಕಾರಿ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು, ‘ ಹಿಂಸಾಚಾರದಲ್ಲಿ ಪಾಲ್ಗೊಂಡು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ನಷ್ಟ ಉಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. 

ADVERTISEMENT

ಹುತಾತ್ಮರ ಗೌರವ: ಅಧಿಕಾರಿಗಳ ಜತೆಗಿನ ಸಭೆಗೂ ಮುನ್ನ ಪ್ರಧಾನಿ ಕಾರ್ಕಿ ಅವರು ಜೆನ್‌–ಝೀ ಪ್ರತಿಭಟನೆ ವೇಳೆ ಮೃತಪಟ್ಟ ಹೋರಾಟಗಾರರ ಸಾವಿಗೆ ಸಂತಾಪ ಸೂಚಿಸಿದರು. ಇದೇ ವೇಳೆ ಮೃತರನ್ನು ಹುತಾತ್ಮರೆಂದು ಪರಿಗಣಿಸಲಾಗುವುದು ಎಂದು  ಘೋಷಿಸಿದ್ದಾರೆ. ಅಲ್ಲದೇ, ಹುತಾತ್ಮರಿಗೆ 10 ಲಕ್ಷ ನೇಪಾಳಿ ರೂಪಾಯಿ  (₹6.25 ಲಕ್ಷ) ಪರಿಹಾರ ನೀಡುವುದಾಗಿಯೂ ಹೇಳಿದ್ದಾರೆ.

ಮೃತರ ಸಂಖ್ಯೆ 72ಕ್ಕೆ ಏರಿಕೆ

ನೇಪಾಳದಲ್ಲಿ ನಡೆದ ಜೆನ್‌–ಝೀ ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ 72ಕ್ಕೆ ತಲುಪಿದೆ ಎಂದು ಭಾನುವಾರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಪ್ರತಿಭಟನೆ ವೇಳೆ ಬೆಂಕಿಗೆ ಆಹುತಿಯಾದ ಕಟ್ಟಡಗಳು ಮಾಲ್‌ ಮನೆಗಳ ಅವಶೇಷಗಳ ಅಡಿಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾದ ಪರಿಣಾಮ ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸಚಿವಾಲಯದ ವಕ್ತಾರ ಪ್ರಕಾಶ್‌ ಬುಡಥೋಕಿ ಹೇಳಿದ್ದಾರೆ. 

’6 ತಿಂಗಳ ಬಳಿಕ ಅಧಿಕಾರದಲ್ಲಿ ಇರುವುದಿಲ್ಲ‘

ಪ್ರತಿಭಟನಕಾರರ ಬೇಡಿಕೆಯಂತೆ ದೇಶದಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ಕಾರ್ಕಿ ಶಪಥ ಮಾಡಿದ್ದಾರೆ. ದೇಶವನ್ನುದ್ದೇಶಿಸಿ ಭಾನುವಾರ  ಮಾತನಾಡಿದ ಅವರು ‍‘ಇಂದು ಯಾವ ಪದವಿಯಲ್ಲಿ ನಾನಿದ್ದೇನೋ ಇದನ್ನು ಎಂದಿಗೂ ನಾನು ಬಯಸಿರಲಿಲ್ಲ. ಬೀದಿಗಿಳಿದು ಹೋರಾಡಿದ ಜನರಿಂದ ಈ ಪದವಿ ಸಿಕ್ಕಿದೆ. ಭ್ರಷ್ಟಾಚಾರ ನಿರ್ಮೂಲನೆ ಉತ್ತಮ ಆಡಳಿತ ಹಾಗೂ ಆರ್ಥಿಕ ಸಮಾನತೆಯು ಜೆನ್‌–ಝಿ ಸಮೂಹದ ಬೇಡಿಕೆಯಾಗಿದೆ. ಈ ಬೇಡಿಕೆಗಳಿಗೆ ಅನುಸಾರವಾಗಿ ನಾವು ಕೆಲಸ ಮಾಡಲಿದ್ದೇವೆ’ ಎಂದು ವಾಗ್ದಾನ ನೀಡಿದ್ದಾರೆ.  ಅಲ್ಲದೇ ‘ಎಂಥದ್ದೇ ಸನ್ನಿವೇಶವಿದ್ದರೂ 6 ತಿಂಗಳ ಬಳಿಕ ನಾವು ಅಧಿಕಾರದಲ್ಲಿ ಇರುವುದಿಲ್ಲ. ಈ 6 ತಿಂಗಳ ಒಳಗೇ ನಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಸಂಸತ್ತು ಮತ್ತು ಸಚಿವರಿಗೆ ಅಧಿಕಾರ ಹಸ್ತಾಂತರಿಸಲು ಬದ್ಧರಾಗಿದ್ದೇವೆ’ ಎಂದೂ  ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.