ADVERTISEMENT

ನೇಪಾಳ: ನಿರ್ಣಾಯಕ ಸಭೆ ಏಳನೇ ಬಾರಿ ಮುಂದೂಡಿಕೆ

ಪಿಟಿಐ
Published 19 ಜುಲೈ 2020, 14:53 IST
Last Updated 19 ಜುಲೈ 2020, 14:53 IST
ಕೆ.ಪಿ. ಶರ್ಮಾ ಒಲಿ
ಕೆ.ಪಿ. ಶರ್ಮಾ ಒಲಿ   

ಕಠ್ಮಂಡು: ನೇಪಾಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ತನ್ನ ಸ್ಥಾಯಿ ಸಮಿತಿಯ ನಿರ್ಣಾಯಕ ಸಭೆಯನ್ನು ಏಳನೇ ಬಾರಿಗೆ ಮುಂಡೂಡಿದೆ.

ಪಕ್ಷದ 45 ಸದಸ್ಯರನ್ನು ಒಳಗೊಂಡಿರುವ ಸ್ಥಾಯಿ ಸಮಿತಿ ಸಭೆ ಭಾನುವಾರ ನಡೆಯಬೇಕಿತ್ತು.

ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಮಾಜಿ ಪ್ರಧಾನಿ ಪುಷ್ಪಕಮಲ್ ದಹಲ್ ‘ಪ್ರಚಂಡ’ ನಡುವೆ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಉನ್ನತ ನಾಯಕರು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಹಾಗಾಗಿ, ನಿರ್ಣಾಯಕ ಸಭೆಯನ್ನು ಏಳನೇ ಬಾರಿಗೆ ಮುಂದೂಡಲಾಗಿದೆ.

ADVERTISEMENT

‘ಭಾನುವಾರ ಮಧ್ಯಾಹ್ನ 3ಕ್ಕೆ ನಿಗದಿಗೊಳಿಸಲಾಗಿದ್ದ ನಿರ್ಣಾಯಕ ಸಭೆಯನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ’ ಎಂದು ನೇಪಾಳದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಭಾನುವಾರ ಬೆಳಿಗ್ಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಪಕ್ಷದ ಉನ್ನತ ನಾಯಕರು ಒಲಿ ಮತ್ತು ‘ಪ್ರಚಂಡ’ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಉದ್ದೇಶದಿಂದ ಸಭೆಯನ್ನು ಎರಡು ದಿನಗಳವರೆಗೆ ಮುಂದೂಡಲು ನಿರ್ಧರಿಸಿದ್ದಾರೆ’ ಎಂದು ಸ್ಥಾಯಿ ಸಮಿತಿ ಸದಸ್ಯ ಗಣೇಶ ಷಾ ತಿಳಿಸಿದ್ದಾರೆ.

ಕಮ್ಯುನಿಸ್ಟ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಪುಷ್ಪಕಮಲ್ ದಹಲ್ ‘ಪ್ರಚಂಡ’ ನೇತೃತ್ವದ ಬಣವು, ಒಲಿ ಅವರ ವಿರುದ್ಧ ಬಂಡಾಯ ಸಾರಿದ್ದು, ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಪಕ್ಷದ ಉನ್ನತ ನಾಯಕರು ಬಗೆಹರಿಸಲು ಯತ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.