ADVERTISEMENT

ನೇಪಾಳಿ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಧಾನಿ ದೇವುಬಾ ಆಯ್ಕೆ

ಪಿಟಿಐ
Published 15 ಡಿಸೆಂಬರ್ 2021, 11:35 IST
Last Updated 15 ಡಿಸೆಂಬರ್ 2021, 11:35 IST
ಶೇರ್‌ ಬಹದ್ದೂರ್‌ ದೇವುಬಾ
ಶೇರ್‌ ಬಹದ್ದೂರ್‌ ದೇವುಬಾ   

ಕಠ್ಮಂಡು: ನೇಪಾಳಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಅವರು ಬುಧವಾರ ಪುನರಾಯ್ಕೆಗೊಂಡರು.

ನೇಪಾಳದ ಬಹುದೊಡ್ಡ ರಾಜಕೀಯ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್‌ನ 14ನೇ ಸಾಮಾನ್ಯಸಭೆ ಮಂಗಳವಾರ ನಡೆದಿತ್ತು. ಈ ಸಂದರ್ಭದಲ್ಲಿ, ಪಕ್ಷದ ಅಧ್ಯಕ್ಷರ ಆಯ್ಕೆಗೆ ಮತದಾನವೂ ನಡೆದಿತ್ತು. ದೇವುಬಾ ಅವರು ಎರಡನೇ ಸುತ್ತಿನಲ್ಲಿ 2,733 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರತಿಸ್ಪರ್ಧಿ ಶೇಖರ್‌ ಕೊಯಿರಾಲಾ 1,855 ಮತಗಳನ್ನು ಪಡೆದರು. ಅವರು ಮಾಜಿ ಪ್ರಧಾನಿ ಗಿರಿಜಾಪ್ರಸಾದ್‌ ಕೊಯಿರಾಲಾ ಅವರ ಸೋದರ ಸಂಬಂಧಿ.

ADVERTISEMENT

ಮೊದಲ ಬಾರಿಗೆ ಮತದಾನ ನಡೆದಾಗ, ಐವರು ಸ್ಪರ್ಧಿಗಳ ಪೈಕಿ ಯಾರಿಗೂ ಶೇ 50ಕ್ಕಿಂತ ಹೆಚ್ಚು ಮತಗಳು ಲಭಿಸಲಿಲ್ಲ. ಅಧ್ಯಕ್ಷರಾಗಲು ಅಗತ್ಯವಿದ್ದ ಸ್ಪಷ್ಟ ಬಹುಮತ ಸಿಗದ ಕಾರಣ ಮತ್ತೊಮ್ಮೆ ಮತದಾನ ಪ್ರಕ್ರಿಯೆ ನಡೆಸಲಾಯಿತು. ಆಗ, ಅಭ್ಯರ್ಥಿಗಳಾದ ಪ್ರಕಾಶ್‌ ಮಾನಸಿಂಗ್‌, ವಿಮಲೇಂದ್ರ ನಿಧಿ ಹಾಗೂ ಕಲ್ಯಾಣ್‌ ಗುರುಂಗ್ ಅವರು ದೇವುಬಾ ಅವರಿಗೆ ಬೆಂಬಲ ಘೋಷಿಸಿ, ಕಣದಿಂದ ಹಿಂದೆ ಸರಿದರು. ಇದು ಬಹುಮತ ಪಡೆಯುವಲ್ಲಿ ದೇವುಬಾ ಅವರಿಗೆ ನೆರವಾಯಿತು ಎಂದು ‘ಹಿಮಾಲಯನ್ ಟೈಮ್ಸ್‌’ ದೈನಿಕ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.