ವಾಷಿಂಗ್ಟನ್: ಅಮೆರಿಕದ ನ್ಯೂ ಅರ್ಲಿನ್ಸ್‌ನಲ್ಲಿ ಹೊಸ ವರ್ಷಾಚರಣೆ ವೇಳೆ ಟ್ರಕ್ ಹರಿಸಿ 15 ಮಂದಿ ಸಾವಿಗೆ ಕಾರಣವಾದ ಶಂಸುದ್ದೀನ್ ಜಬ್ಬಾರ್ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದು, ಅವನು ಐಎಸ್‌ಐಎಸ್‌ನ ಕಟ್ಟಾ ಬೆಂಬಲಿಗನಾಗಿದ್ಬ ಬಗ್ಗೆ ಸುಳಿವು ಸಿಕ್ಕಿದೆ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ನ್ಯೂ ಅರ್ಲಿನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ಜಬ್ಬಾರ್ ಪಿಕಪ್ ಟ್ರಕ್ ಹರಿಸಿದ್ದ. ಈ ಭಯೋತ್ಪಾದಕ ಕೃತ್ಯದಲ್ಲಿ 15 ಮಂದಿ ಮೃತಪಟ್ಟು, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬಳಿಕ, ಜಬ್ಬಾರ್ ಬಳಸಿದ್ದ ಟ್ರಕ್‌ನಲ್ಲಿ ಐಎಸ್‌ಐಎಸ್ ಧ್ವಜ ಸಿಕ್ಕಿತ್ತು.
ಇದೊಂದು ಭಯೋತ್ಪಾದಕ ಕೃತ್ಯ ಎಂದಿರುವ ಎಫ್‌ಬಿಐ ತನಿಖೆ ನಡೆಸುತ್ತಿದೆ. ಘಟನಾ ಸ್ಥಳದಲ್ಲೇ ಗುಂಡಿಕ್ಕಿ ಜಬ್ಬಾರ್‌ನನ್ನು ಪೊಲೀಸರು ಕೊಂದಿದ್ದರು.
42 ವರ್ಷ ವಯಸ್ಸಿನ ಜಬ್ಬಾರ್ 13 ವರ್ಷ ಅಮೆರಿಕ ಸೇನೆಯಲ್ಲಿ ಕೆಲಸ ಮಾಡಿದ್ದ. ಅಫ್ಗಾನಿಸ್ತಾನಕ್ಕೆ ನಿಯೋಜನೆಯಾಗಿದ್ದ ಅಮೆರಿಕ ಪಡೆಯಲ್ಲೂ ಸೇವೆ ಸಲ್ಲಿಸಿದ್ದ. ಹೀಗಿದ್ದರೂ ಆತ ಐಎಸ್‌ಐಎಸ್‌ನಿಂದ ಪ್ರಭಾವಿತನಾಗಿ ದಾಳಿ ಸಂಘಟಿಸಿದ ಬಗ್ಗೆ ಎಫ್‌ಬಿಐ ತನಿಖೆ ನಡೆಸುತ್ತಿದೆ.
ಸದ್ಯಕ್ಕೆ, ದಾಳಿಯಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ತನ್ನ ವಾಹನವನ್ನು ಗುಂಪಿನತ್ತ ನುಗ್ಗಿಸಿದ ಕೆಲವೇ ಗಂಟೆಗಳ ಮೊದಲು ಫ್ರೆಂಚ್ ಕ್ವಾರ್ಟರ್‌ನ ಹತ್ತಿರದ ಎರಡು ಸ್ಥಳಗಳಲ್ಲಿ ಐಸ್ ಕೂಲರ್‌ಗಳಲ್ಲಿ ಸ್ಫೋಟಕಗಳನ್ನು ಹಾಕಿದ್ದ ಎಂದು ಎಫ್‌ಬಿಐ ನನಗೆ ತಿಳಿಸಿದೆ ಎಂದು ಬೈಡನ್ ಹೇಳಿದ್ದಾರೆ.
ಎರಡು ಐಸ್ ಕೂಲರ್‌ಗಳನ್ನು ಸ್ಫೋಟಿಸಲು ಆತ ಡೆಟೋನೇಟರ್ ರಿಮೋಟ್ ಹೊಂದಿದ್ದ ಎಂದೂ ಅವರು ತಿಳಿಸಿದ್ದಾರೆ.
ದಾಳಿಕೋರ ದಾಳಿಗೂ ಕೆಲವೇ ಗಂಟೆಗಳ ಮೊದಲು ಹಲವು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದು, ಐಸ್‌ಐಎಸ್‌ಗೆ ಅವನ ಬಲವಾದ ಬೆಂಬಲವನ್ನು ಸೂಚಿಸುತ್ತದೆ. ಫೆಡರಲ್ ಕಾನೂನು ಜಾರಿ ಮತ್ತು ಗುಪ್ತಚರ ಅಧಿಕಾರಿಗಳು ದಾಳಿಗೆ ಸಂಬಂಧಿಸಿದ ಯಾವುದೇ ವಿದೇಶಿ ಅಥವಾ ದೇಶೀಯ ಸಂಪರ್ಕಗಳ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಬೈಡನ್ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಕ್ಯಾಂಪ್ ಡೇವಿಡ್‌ನಿಂದ ಹಿಂದಿರುಗಿದ ಕೂಡಲೇ ಬೈಡೆನ್ ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದ್ದರು. ನ್ಯೂ ಅರ್ಲಿನ್ಸ್ ದಾಳಿ ಮತ್ತು ಲಾಸ್ ವೇಗಾಸ್‌ನಲ್ಲಿನ ಸ್ಫೋಟದ ನಡುವೆ ಯಾವುದೇ ಸಂಬಂಧವಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.