
ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರು ಹಂಚಿಕೊಂಡಿರುವ ಚಿತ್ರಗಳು
ಕೃಪೆ: X / @HardeepSPuri
ನ್ಯೂಯಾರ್ಕ್: ಸಿಖ್ ಸಮುದಾಯದ 9ನೇ ಧರ್ಮ ಗುರು ತೇಜ್ ಬಹದ್ದೂರ್ ಅವರ ಹೆಸರನ್ನು ನ್ಯೂಯಾರ್ಕ್‌ನ ರಸ್ತೆಗೆ ಇಡಲಾಗಿದೆ. ಅವರ ʼತ್ಯಾಗ, ಕರುಣೆ ಹಾಗೂ ನ್ಯಾಯದ ಪರ ಅಚಲ ನಿಲುವನ್ನುʼ ಸ್ಮರಿಸುವ ಸಲುವಾಗಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯೂಯಾರ್ಕ್ ಸಿಟಿ ಕೌನ್ಸಿಲ್ ತಿಳಿಸಿದೆ.
ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದು, ಸಿಖ್ ಸಮುದಾಯದ ಪಾಲಿಗೆ ಇದೊಂದು ʼಹೆಮ್ಮೆಯ ಕ್ಷಣʼ ಎಂದು ಪ್ರತಿಪಾದಿಸಿದ್ದಾರೆ.
ʼರಿಚ್‌ಮಂಡ್ ಹಿಲ್ ಪ್ರದೇಶದಲ್ಲಿರುವ ಸಿಖ್ ಸಮುದಾಯದ ಮಹತ್ವವನ್ನು ಹಾಗೂ ನ್ಯೂಯಾರ್ಕ್‌ನ ಸಾಂಸ್ಕೃತಿಕ ರಚನೆಗೆ ಸಿಖ್ ಸಮುದಾಯದ ಕೊಡುಗೆಯನ್ನು ಈ ಗೌರವವು ಎತ್ತಿ ತೋರಿಸುತ್ತದೆ. 2009 ರಿಂದ 2013ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿದ್ದ ವೇಳೆ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದೆʼ ಎಂದು ಬರೆದುಕೊಂಡಿದ್ದಾರೆ.
ರಸ್ತೆಗೆ ಗುರು ತೇಜ್ ಬಹದ್ದೂರ್ ಅವರ ಹೆಸರನ್ನು ಮರುನಾಮಕರಣ ಮಾಡುವುದಕ್ಕೆ ಸಂಬಂಧಿಸಿದ ನಿರ್ಣಯವನ್ನು ನ್ಯೂಯಾರ್ಕ್ ಸಿಟಿ ಕೌನ್ಸಿಲ್ ಸದಸ್ಯ ಲಿನ್ ಚುಲ್ಮನ್ ಮಂಡಿಸಿದ್ದರು.
ದಿಪಾವಳಿ ಮುನ್ನಾದಿನ ನಡೆದ ಮರುನಾಮಕರಣ ಕಾರ್ಯಕ್ರಮದ ಬಳಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ʼಗುರುದ್ವಾರ ಮಖಾನ್ ಶಾ ಲುಬಾನ ಇರುವ ರಿಚ್‌ಮಂಡ್ ಹಿಲ್‌ನ 114ನೇ ರಸ್ತೆ ಹಾಗೂ 101ನೇ ಅವೆನ್ಯೂವನ್ನು ಇನ್ನುಮುಂದೆ ಗುರು ತೇಜ್ ಬಹದ್ದೂರ್ ಜಿ ಮಾರ್ಗ ಎಂದು ಕರೆಯಲಾಗುವುದುʼ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.