
ಸ್ಯಾನ್ ಯುವಾನ್: ನ್ಯೂಯಾರ್ಕ್‌ನ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಪೋರ್ಟೊ ರಿಕೊದಲ್ಲಿ ನಡೆಯಲಿರುವ ಜನಪ್ರತಿನಿಧಿಗಳ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಗುರುವಾರದಂದೇ ಅವರ ವಿಜಯೋತ್ಸವ ಪ್ರವಾಸ ಆರಂಭಗೊಂಡಿದೆ. ಪೋರ್ಟೊ ರಿಕೊದ ಸ್ಯಾನ್ ಯುವಾನ್‌ನಲ್ಲಿ ನಡೆಯಲಿರುವ ಸಭೆಯು, ನ್ಯೂಯಾರ್ಕ್‌ನ ರಾಜಕಾರಣಿಗಳು ಮತ್ತು ರಾಜಕೀಯ ಪ್ರಭಾವಿಗಳನ್ನು ಒಂದೇ ವೇದಿಕೆಯಡಿ ತರಲಿದೆ. ರಾಜಕೀಯ ಕಾರ್ಯತಂತ್ರದ ದೃಷ್ಟಿಯಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ. ಈ ಬಾರಿ ಮಮ್ದಾನಿ ಈ ಸಭೆಯ ಕೇಂದ್ರಬಿಂದು ಆಗಿದ್ದಾರೆ.
‘ಈ ಸಭೆಯಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ. ನೀವು ಪೋರ್ಟೊ ರಿಕೊವನ್ನು ಹೊರಗಿಟ್ಟು, ನ್ಯೂಯಾರ್ಕ್ ನಗರದ ಕಥೆ ಹೇಳಲು ಸಾಧ್ಯವಿಲ್ಲ’ ಎಂದು ಮಮ್ದಾನಿ ಶುಕ್ರವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರಿವರ್ತನಾ ತಂಡ: ನ್ಯೂಯಾರ್ಕ್ ನಗರದ ‘ಪರಿವರ್ತನಾ ತಂಡ’ವನ್ನು ಈ ವಾರ ಪ್ರಕಟಿಸುವುದಾಗಿ ಮಮ್ದಾನಿ ಹೇಳಿದ್ದಾರೆ. ಅನುಭವಿ ಅಧಿಕಾರಿಗಳು ಈ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದು, ಈ ತಂಡವು, ನಗರ ನಿವಾಸಿಗಳ, ವಿಶೇಷವಾಗಿ ಕಾರ್ಮಿಕರ ಜೀವನ ನಿರ್ವಹಣೆ ವೆಚ್ಚ ಕಡಿತಗೊಳಿಸುವ ಮಮ್ದಾನಿ ಅವರ ಯೋಜನೆಗಳನ್ನು ಜಾರಿಗೆ ತರಲಿದೆ.
ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಮಮ್ದಾನಿ ಅವರು ನ್ಯೂಯಾರ್ಕ್‌ನ ನಿರ್ಗಮಿತ ಮೇಯರ್ ಎರಿಕ್ ಆ್ಯಡಮ್ಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಮಮ್ದಾನಿ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಎರಿಕ್ ನೀಡಿದರು.
ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಮ್ದಾನಿ, ಪ್ರಭಾವಿ ರಾಜಕೀಯ ಮುಖಂಡ ಆ್ಯಂಡ್ರ್ಯೂ ಕೌಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.