ADVERTISEMENT

ಬ್ರಿಟನ್‌ನ ನಿವಾಸದಲ್ಲಿ ವಿವಾಹವಾದ ಮಲಾಲಾ ಯೂಸುಫ್‌ಜಾಯ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2021, 7:31 IST
Last Updated 10 ನವೆಂಬರ್ 2021, 7:31 IST
ಚಿತ್ರ ಕೃಪೆ – ಮಲಾಲಾ ಅವರ ಟ್ವಿಟರ್ ಕಾತೆ
ಚಿತ್ರ ಕೃಪೆ – ಮಲಾಲಾ ಅವರ ಟ್ವಿಟರ್ ಕಾತೆ   

ಲಂಡನ್: ನೊಬೆಲ್ ಪುರಸ್ಕೃತ ಮಲಾಲಾ ಯೂಸುಫ್‌ಜಾಯ್‌ ಅವರು ಅಸರ್ ಎಂಬುವವರನ್ನು ಮದುವೆಯಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಬರ್ಮಿಂಗ್‌ಹ್ಯಾಂ ನಗರದ ನಿವಾಸದಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿದೆ.

‘ಇದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸರ್ ಮತ್ತು ನಾನು ವಿವಾಹವಾಗಿದ್ದು, ಜೀವನ ಸಂಗಾತಿಗಳಾಗಿದ್ದೇವೆ. ಬರ್ಮಿಂಗ್‌ಹ್ಯಾಂನ ನಿವಾಸದಲ್ಲಿ ನಮ್ಮ ಕುಟುಂಬದವರ ಉಪಸ್ಥಿತಿಯಲ್ಲಿ ವಿವಾಹ ನೆರವೇರಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ’ ಎಂದು ಮಲಾಲಾ ಟ್ವೀಟ್ ಮಾಡಿದ್ದಾರೆ.

ADVERTISEMENT

ಪತಿಯ ಬಗ್ಗೆ ಮಲಾಲಾ ಹೆಚ್ಚಿನ ವಿವರ ತಿಳಿಸಿಲ್ಲ. ಟ್ವಿಟರ್‌ನಲ್ಲಿ ‘ಅಸರ್’ ಎಂದಷ್ಟೇ ಉಲ್ಲೇಖಿಸಿದ್ದಾರೆ. ಮಲಾಲಾ ವಿವಾಹವಾಗಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ‘ಅಸರ್ ಮಲಿಕ್’ ಅವರನ್ನು ಎಂದು ಕೆಲವು ಅಂತರ್ಜಾಲ ತಾಣಗಳು ವರದಿ ಮಾಡಿವೆ. ಆದರೆ ಈ ವಿಚಾರ ಇನ್ನೂ ದೃಢಪಟ್ಟಿಲ್ಲ ಎಂದು ‘ರಾಯಿಟರ್ಸ್‌’ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಜನರು ಯಾಕೆ ಮದುವೆಯಾಗುತ್ತಾರೆ ಎಂಬುದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಜೀವನದಲ್ಲಿ ನಿಮಗೆ ಒಬ್ಬ ಸಂಗಾತಿ ಬೇಕೆಂದಿದ್ದರೆ ಅದಕ್ಕೆ ಮದುವೆ, ಕರಾರು ಪತ್ರಗಳಿಗೆ ಏಕೆ ಸಹಿ ಹಾಕಬೇಕು? ಸುಮ್ಮನೇ ಇಬ್ಬರೂ ಯಾಕೆ ಜತೆಯಾಗಿರಬಾರದು’ ಎಂದು ಜುಲೈ ತಿಂಗಳಲ್ಲಿ ಬ್ರಿಟನ್‌ನ ನಿಯತಕಾಲಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಲಾಲಾ ಪ್ರಶ್ನಿಸಿದ್ದರು. ಈ ಕುರಿತು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಈಗ ಟೀಕೆ ವ್ಯಕ್ತವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.