ADVERTISEMENT

ಭಾರತದೊಂದಿಗೆ ಶಾಂತಿ ಮಾತುಕತೆಯಿಲ್ಲ: ಪಾಕ್‌

ಕಾಶ್ಮೀರ ವಿವಾದ; ಟ್ರಂಪ್‌ ಮಧ್ಯಸ್ಥಿಕೆ ವಹಿಸಲಿ: ಖುರೇಶಿ

ಪಿಟಿಐ
Published 17 ಜನವರಿ 2020, 19:45 IST
Last Updated 17 ಜನವರಿ 2020, 19:45 IST
ಶಾ ಮಹ್ಮೂದ್‌ ಖುರೇಶಿ  
ಶಾ ಮಹ್ಮೂದ್‌ ಖುರೇಶಿ     

ವಾಷಿಂಗ್ಟನ್‌ : ‘ಕಾಶ್ಮೀರ ವಿವಾದ ಇತ್ಯರ್ಥಗೊಳ್ಳುವವರೆಗೂ ಭಾರತದೊಂದಿಗೆ ಯಾವುದೇ ಶಾಂತಿ ಮಾತುಕತೆಗೆ ಪಾಕಿಸ್ತಾನ ಸಿದ್ಧವಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಶಾ ಮಹ್ಮೂದ್‌ ಖುರೇಶಿ ಹೇಳಿದರು.

ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಖುರೇಶಿ,ಗುರುವಾರ ಸೆಂಟರ್‌ ಫಾರ್‌ ಸ್ಟ್ರಾಟಜಿಕ್‌ ಆ್ಯಂಡ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ (ಸಿಎಸ್‌ಐಎಸ್‌) ವಿಚಾರ ವೇದಿಕೆಯಲ್ಲಿ ಮಾತನಾಡಿದರು. ‘ಕಾಶ್ಮೀರ ಸಮಸ್ಯೆ ಬಗೆಹರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಧ್ಯಸ್ಥಿಕೆ ವಹಿಸಬೇಕು’ ಎಂಬ ಪಾಕಿಸ್ತಾನದ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.

‘ನೆರೆ ರಾಷ್ಟ್ರಗಳಲ್ಲಿ ಶಾಂತಿ ಇರಬೇಕು ಎಂಬುವುದನ್ನು ನಮ್ಮ ಸರ್ಕಾರ ಬಯಸುತ್ತದೆ. ಆರ್ಥಿಕ ಸುಧಾರಣೆ ಹಾಗೂ ಅಭಿವೃದ್ಧಿಗೆ ಶಾಂತಿ ಅವಶ್ಯ. ಆದರೆ ಭಾರತದೊಂದಿಗಿನ ಶಾಂತಿಗಾಗಿ ನಾವು ಬೆಲೆ ತೆರಲು ಸಿದ್ಧವಿಲ್ಲ. ಶಾಂತಿಗಾಗಿ ಘನತೆಯನ್ನು ಬದಿಗಿಡಲು ಸಾಧ್ಯವಿಲ್ಲ. ಕಾಶ್ಮೀರ ವಿವಾದ ಬಗೆಹರಿಯದೇ ಶಾಂತಿ ಮಾತುಕತೆ ಇಲ್ಲ’ ಎಂದರು.

ADVERTISEMENT

ಹಿಂದೂ ರಾಷ್ಟ್ರ ನಿರ್ಮಾಣ ಆರೋಪ: ‘ಬಡತನ ಮತ್ತು ಹಸಿವಿನ ವಿರುದ್ಧದ ಹೋರಾಟದ ಬದಲು ಆರ್‌ಎಸ್‌ಎಸ್‌ ಪ್ರೇರಿತ ಬಿಜೆಪಿ ಸರ್ಕಾರವುಹಿಂದುತ್ವ ಮತ್ತು ಅಖಂಡ ಭಾರತದ ಕಲ್ಪನೆಯ ಯೋಜನೆಯೊಂದಿಗೆಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಿದ್ಧವಾಗಿದೆ’ ಎಂದು ಆರೋಪಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನುಆ.5ರಂದು ಭಾರತ ಸರ್ಕಾರ ರದ್ದುಗೊಳಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾಗಿದೆ.

ವಿಶ್ವಸಂಸ್ಥೆ ನಿರ್ಣಯ ಉಲ್ಲಂಘನೆ

‘ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದು ಹಾಗೂ ಪುನರ್‌ರಚನೆ ಮೂಲಕಭಾರತವು ಅಂತರರಾಷ್ಟ್ರೀಯ ನಿಯಮ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹಲವು ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಖುರೇಶಿ ಆರೋಪಿಸಿದರು.

‘ಕಾಶ್ಮೀರ ಜನತೆಯ ಸಾಮರ್ಥ್ಯಕ್ಕೆ ಕಡಿವಾಣ ಹಾಕಲು ಅವರನ್ನು ಗೃಹಬಂಧನದಲ್ಲಿರಿಸಿ, ಇಂಟರ್‌ನೆಟ್‌, ಫೋನ್‌ ಬಳಕೆಗೂ ನಿರ್ಬಂಧ ಹೇರಲಾಗಿತ್ತು. ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಟ್ರಂಪ್‌ ಹಲವು ಬಾರಿ ಮುಂದಾಗಿದ್ದರು. ಇದನ್ನು ನಾವು ಸ್ವಾಗತಿಸುತ್ತೇವೆ’ ಎಂದರು.

ಪಾಕಿಸ್ತಾನದತ್ತ ಬೊಟ್ಟು: ‘ಉಗ್ರರಿಗೆ ನೆರವು ನೀಡುತ್ತಿದ್ದ ಭಾರತದ ಪೊಲೀಸ್‌ ಅಧಿಕಾರಿ ದೇವಿಂದರ್‌ ಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ. ಹಲವು ಪ್ರಮುಖ ಉಗ್ರರ ದಾಳಿಯಲ್ಲಿ ಈತನ ಕೈವಾಡವಿರುವುದು ಬಹಿರಂಗವಾಗಿದೆ. ಈ ದಾಳಿಗೆ ಭಾರತವು ಪಾಕಿಸ್ತಾನವನ್ನು ಹೊಣೆ ಮಾಡುತ್ತಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.