
ಬೀಜಿಂಗ್ : ‘ಅಮೆರಿಕದ ವಲಸೆ ಅಧಿಕಾರಿಗಳು ಮಿನ್ನೆಪೊಲೀಸ್‌ನಲ್ಲಿ ನರ್ಸ್ ಅಲೆಕ್ಸ್ ಪ್ರೆಟಿ (37) ಎಂಬವರನ್ನು ಗುಂಡಿಟ್ಟು ಕೊಂದಿರುವುದು ಕಳವಳಕಾರಿ’ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹೇಳಿದ್ದಾರೆ.
‘ಘಟನೆಯ ಕೆಲ ದೃಶ್ಯಾವಳಿಗಳನ್ನು ನೋಡಿದ ಯಾರೇ ಆದರೂ ಅವು ಕಳವಳಕಾರಿ ಎಂದು ಹೇಳದಿರಲು ಸಾಧ್ಯವಿಲ್ಲ. ಆದರೆ, ನಾನು ಎಲ್ಲ ದೃಶ್ಯಾವಳಿ ಅಥವಾ ವಿವರಗಳನ್ನು ನೋಡಿದ್ದೇನೆ ಎಂದು ಹೇಳಿಕೊಳ್ಳುತ್ತಿಲ್ಲ. ಆದರೂ, ನಾನು ನೋಡಿರುವ ದೃಶ್ಯಗಳ ಮಟ್ಟಿಗೆ ಅವು ನಿಜಕ್ಕೂ ಆತಂಕಕಾರಿ ಎಂದೇ ಹೇಳುತ್ತೇನೆ’ ಎಂದು ಸ್ಟಾರ್ಮರ್ ಅವರು ಬುಧವಾರ ಅಧಿಕೃತ ಭೇಟಿಗಾಗಿ ಚೀನಾಕ್ಕೆ ಆಗಮಿಸಿದ ವಿಮಾನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಶನಿವಾರ ನಡೆದ ಪ್ರತಿಭಟನೆ ವೇಳೆ, ವಲಸೆ ಅಧಿಕಾರಿಗಳು ಪ್ರತಿಭಟನಾನಿರತ ಮಹಿಳೆಯೊಬ್ಬರನ್ನು ದೂರಕ್ಕೆ ತಳ್ಳಿದಾಗ ಆಕೆಯ ನೆರವಿಗೆ ಅಲೆಕ್ಸ್ ಪ್ರೆಟಿ ಧಾವಿಸಿದ್ದರು. ಅಲ್ಲಿದ್ದ ಅಧಿಕಾರಿಗಳು ಅವರನ್ನು ನೆಲಕ್ಕೆ ಉರುಳಿಸಿ ಸಮೀಪದಿಂದಲೇ ಗುಂಡು ಹಾರಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.