ADVERTISEMENT

ಟರ್ಕಿ, ಸಿರಿಯಾ: ಭೂಕಂಪಕ್ಕೆ 2,700ಕ್ಕೂ ಅಧಿಕ ಸಾವು

ಐಎಎನ್ಎಸ್
Published 6 ಫೆಬ್ರುವರಿ 2023, 20:07 IST
Last Updated 6 ಫೆಬ್ರುವರಿ 2023, 20:07 IST
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ (ಚಿತ್ರಕೃಪೆ: Twitter / @SyriaCivilDef)
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ (ಚಿತ್ರಕೃಪೆ: Twitter / @SyriaCivilDef)   

ಅಂಕಾರಾ/ಅಜ್ಮರಿನ್‌/ಇಸ್ತಾಂಬುಲ್‌ (ಎಪಿ/ರಾಯಿಟರ್ಸ್‌/ಎಎಫ್‌ಪಿ): ಟರ್ಕಿಯ ಆಗ್ನೇಯ ಭಾಗದ ನೆರೆಯ ಸಿರಿಯಾದ ಉತ್ತರ ಭಾಗ ದಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳಿಂದ 2,762 ಜನರು ಮೃತಪಟ್ಟಿ
ದ್ದಾರೆ. ಎಂಟು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿರಾರು ಕಟ್ಟಡಗಳು, ಮನೆಗಳು ನೆಲಸಮವಾಗಿವೆ.

ರಿಕ್ಟರ್‌ ಮಾಪಕದಲ್ಲಿ 7.8 ತೀವ್ರತೆಯ ಪ್ರಬಲ ಕಂಪನ ಮೊದಲಿಗೆ ನಸುಕಿನಲ್ಲಿ ಸಂಭವಿಸಿತು. ಇದಾ‌ದ ಕೆಲವು ಗಂಟೆಗಳ ನಂತರ 7.5 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ.

ಕುಸಿದಿರುವ ಸಾವಿರಾರು ಕಟ್ಟಡಗಳ ಅವಶೇಷಗಳಡಿ ಇನ್ನಷ್ಟು ಜನರು ಸಿಲುಕಿರುವ ಶಂಕೆ ಇದ್ದು, ಸಾವು ಮತ್ತು ಗಾಯಾಳುಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಉಭಯ ರಾಷ್ಟ್ರಗಳ ಹಲವು ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿಹೋಗಿವೆ.

ADVERTISEMENT

ಹಲವು ನಗರಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಭಗ್ನಾವಶೇಷಗಳ ರಾಶಿಗಳು ಕಾಣಿಸುತ್ತಿದ್ದು, ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ
ಕಾರ್ಯದಲ್ಲಿ ತೊಡಗಿದ್ದಾರೆ.

ಟರ್ಕಿಯ ಆಗ್ನೇಯ ಪ್ರಾಂತ್ಯದ ಗಾಝಿಯಾನ್‌ಟೆಪ್‌ ಪಟ್ಟಣದ ಉತ್ತರಕ್ಕೆ 18 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರಬಿಂದುವಾಗಿದೆ. ಡಮಾಸ್ಕಸ್ ಮತ್ತು ಬೇರೂತ್‌ನಲ್ಲಿ ಸಾವಿರಾರು ಜನ ಮೃತಪಟ್ಟಿದ್ದು, ಲಕ್ಷಾಂತರ ಜನ ಬೀದಿಪಾಲಾಗಿದ್ದಾರೆ.

ಸಿರಿಯಾದಲ್ಲಿ ಎರಡು ದಶಕಗಳ ಅಂತರ್‌ಯುದ್ಧದ ಪರಿಣಾಮ ಗಡಿಯ ಎರಡೂ ಬದಿಗಳಲ್ಲಿ ನೆಲೆಕಂಡು
ಕೊಂಡಿದ್ದ ವಲಸಿಗರ ಜನವಸತಿ ಪ್ರದೇಶಗಳು ಕಂಪನದ ಪರಿಣಾಮದಿಂದ ತತ್ತರಿಸಿವೆ.

ಧರೆ ಕಂಪಿಸಿದಾಗ ನಿದ್ರೆ ಯಿಂದ ಎಚ್ಚರಗೊಂಡವರು ಜೀವ ಉಳಿಸಿಕೊಳ್ಳಲು ಮಳೆ, ಕೊರೆವ ಚಳಿಯಲ್ಲೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ದಿಢೀರ್‌ ಎದುರಾದ ಈ ಆಘಾತದಿಂದ ನಿವಾಸಿಗಳು ಹೊರ
ಬರುವಷ್ಟರಲ್ಲಿ ಕ್ಷಣಾರ್ಧದಲ್ಲೇ ಬಹುಮಹಡಿ ಕಟ್ಟಡಗಳು, ವಸತಿ ಸಮುಚ್ಚಯಗಳು ಧರೆಗುರುಳಿವೆ.

ಭೂಕಂಪ ಪೀಡಿತ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನವು ಪರಿಹಾರ ಕಾರ್ಯಾಚರಣೆಗೆ ತೊಡಕಾಗಿದೆ.

ಮತ್ತೆ ಭೂಕಂಪ, ಮುನ್ನೆಚ್ಚರಿಕೆ: ಮತ್ತಷ್ಟು ಭೂಕಂಪ ಸಂಭವಿಸುವ ಮುನ್ನೆಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದು, ಜನರು ಜೀವಭಯದಿಂದ ಸುರಕ್ಷಿತ ನೆಲೆಗಳಿಗೆ ತೆರಳುತ್ತಿದ್ದಾರೆ. ಇದರಿಂದಲೂ ಸಂಚಾರ ದಟ್ಟಣೆ ಉಂಟಾಗಿ, ಪರಿಹಾರ ಕಾರ್ಯಕ್ಕೆ ಮತ್ತಷ್ಟು ಅಡ್ಡಿಯಾಗಿದೆ. ಸಿರಿಯಾದ ಅಲೆಪ್ಪೊ ಮತ್ತು ಹಮಾದ್ ನಗರಗಳಿಂದ ಹಿಡಿದು ಟರ್ಕಿಯ ದಿಯರ್‌ಬಕೀರ್‌
ವರೆಗೆ ಈಶಾನ್ಯಕ್ಕೆ 330 ಕಿಲೋಮೀಟರ್‌
ಗಿಂತಲೂ ಹೆಚ್ಚು ವಿಸ್ತಾರದ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.