ADVERTISEMENT

ಉಗ್ರರ ಸಂಘಟನೆಗಳ ಇತಿಹಾಸವೇ ಪಾಕ್‌ ಜೊತೆಗಿದೆ: ಬಿಲಾವಲ್‌ ಭುಟ್ಟೊ

ಪಾಕ್‌ಗೆ ಸಾಕಷ್ಟು ನಷ್ಟವೂ ಆಗಿದೆ –ಪಿಪಿಪಿ ಮುಖ್ಯಸ್ಥ ಬಿಲಾವಲ್‌ ಭುಟ್ಟೊ ಹೇಳಿಕೆ

ಪಿಟಿಐ
Published 2 ಮೇ 2025, 15:41 IST
Last Updated 2 ಮೇ 2025, 15:41 IST
ಬಿಲಾವಲ್‌ ಭುಟ್ಟೊ
ಬಿಲಾವಲ್‌ ಭುಟ್ಟೊ   

ಲಂಡನ್‌/ಇಸ್ಲಾಮಾಬಾದ್: ‘ಉಗ್ರರ ಸಂಘಟನೆಗಳ ಇತಿಹಾಸವೇ ಪಾಕ್‌ ಜೊತೆಗಿದೆ. ಇದರಿಂದ ದೇಶ ಸಾಕಷ್ಟು ನಲುಗಿದೆ’ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್‌ ಭುಟ್ಟೊ ಜರ್ಧಾರಿ ಹೇಳಿದ್ದಾರೆ.

ಸ್ಕೈ ನ್ಯೂಸ್‌ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಪಾಕಿಸ್ತಾನ ದಶಕ ಕಾಲ ‘ಕೆಟ್ಟ ಕೆಲಸ’ ಮಾಡಿದೆ’ ಎಂಬ ಸಚಿವ ಕ್ವಾಜಾ ಅಸೀಫ್‌ ಹೇಳಿಕೆ ಉಲ್ಲೇಖಿಸಿ ಈ ಮಾತು ಹೇಳಿದರು.  

‘ಪಾಕ್‌ ಅನ್ನು ಉಗ್ರರ ಸಂಘಟನೆಗಳು ನೆಲೆ ಆಗಿಸಿಕೊಂಡಿದ್ದವು ಎಂಬುದು ರಹಸ್ಯವೇನೂ ಅಲ್ಲ. ಇದರಿಂದ ದೇಶಕ್ಕೆ ನಷ್ಟವಾಯಿತು. ಪದೇ ಪದೇ ಅದರ ಪರಿಣಾಮ ಎದುರಿಸಿದೆವು‘ ಎಂದರು.

ADVERTISEMENT

‘ಆದರೆ, ನಾವು ಇದರಿಂದ ಪಾಠ ಕಲಿತಿದ್ದೇವೆ. ಪರಿಹಾರ ಕಂಡುಕೊಳ್ಳಲು ಆಂತರಿಕ ಸುಧಾರಣೆಗೆ ಒತ್ತು ನೀಡಿದ್ದೇವೆ’ ಎಂದು ಪ್ರತಿಪಾದಿಸಿದರು. 

ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ಕ್ರಮಕ್ಕೆ ಪ್ರತಿಕ್ರಿಯಿಸಿ, ‘ನೀರು ಹರಿಯದಿದ್ದರೆ, ರಕ್ತ ಹರಿಯಲಿದೆ’ ಎಂದು ಬಿಲಾವಲ್‌ ಈ ಹಿಂದೆ ಹೇಳಿದ್ದರು. 

ಈ ಬಗ್ಗೆ ಗಮನಸೆಳೆದಾಗ, ‘ಅದು ನನ್ನ ಉದ್ದೇಶವಲ್ಲ. ನನ್ನ ಹೇಳಿಕೆ ಅದಾಗಿರಲಿಲ್ಲ. ಖಂಡಿತವಾಗಿ ರಕ್ತಪಾತಕ್ಕೆ ಪ್ರೇರೇಪಿಸುವಂತಹದು ಆಗಿರಲಿಲ್ಲ’ ಎಂದು ತಿಳಿಸಿದರು.

ವಿಶ್ವಸಂಸ್ಥೆ ಲಾಂಛನ

‘ಉದ್ವಿಗ್ನ ಸ್ಥಿತಿ: ಶೀಘ್ರ ವಿಶ್ವಸಂಸ್ಥೆ ಸಭೆ’

ವಿಶ್ವಸಂಸ್ಥೆ (ಪಿಟಿಐ): ‘ಪಹಲ್ಗಾಮ್‌ ದಾಳಿ ಕೃತ್ಯದ ನಂತರದ ಸ್ಥಿತಿ ಚರ್ಚೆಗೆ ಶೀಘ್ರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ನಡೆಯಲಿದೆ’ ಎಂದು ಅಧ್ಯಕ್ಷ ಎವಾಜೆಂಲೊಸ್‌ ಸೆಕೆರಿಸ್ ತಿಳಿಸಿದರು. ‘ಸಭೆ ನಡೆಸಲು ಮನವಿ ಬಂದಿವೆ. ಪರಿಸ್ಥಿತಿ ಗಮನಿಸುತ್ತಿದ್ದು ಉಭಯ ರಾಷ್ಟ್ರಗಳ ಜೊತೆ ಸಂ‍ಪರ್ಕದಲ್ಲಿದ್ದೇವೆ. ಶೀಘ್ರ ಸಭೆ ನಡೆಯಲಿದೆ’ ಎಂದು ಪ್ರತಿಕ್ರಿಯಿಸಿದರು.

ದಿನದ ಬೆಳವಣಿಗೆಗಳು..

  • ಪಹಲ್ಗಾಮ್‌ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಭಾರತ ಪಾಕ್‌ ಮೇಲೆ ದಾಳಿ ನಡೆಸಿದರೆ ಚೀನಾ ಜೊತೆಗೂಡಿ ಈಶಾನ್ಯ ರಾಜ್ಯದ ಅತಿಕ್ರಮಣಕ್ಕೆ ಮುಂದಾಗಬೇಕು ಎಂದು ಬಾಂಗ್ಲಾದ ಮಾಜಿ ಸೇನಾಧಿಕಾರಿ ಉಸ್ತುವಾರಿ ಸರ್ಕಾರದ ಮುಖ್ಯಸ್ಥ ಯೂನಸ್‌ ಅವರ ಆಪ್ತ ಸಲಹೆ ಮಾಡಿದ್ದಾರೆ.  ಮೇಜರ್‌ ಜನರಲ್ (ನಿವೃತ್ತ) ಎಎಲ್‌ಎಂ ಫಜ್ಲುರ್ ರಹಮಾನ್ ಅವರು ಫೇಸ್‌ಬುಕ್‌ ಖಾತೆಯಲ್ಲಿ ಈ ಸಲಹೆ ನೀಡಿದ್ದಾರೆ. ಆದರೆ ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.  

  • ಸಿಂಧೂ ನದಿ ಒಪ್ಪಂದದ ಅಮಾನತು ನಡೆ ವಿರುದ್ಧ ಭಾರತಕ್ಕೆ ರಾಜತಾಂತ್ರಿಕ ನೋಟಿಸ್‌ ಜಾರಿಗೆ ಪಾಕಿಸ್ತಾನ ಚಿಂತನೆ ನಡೆಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.  ಪ್ರಮುಖ ಸಚಿವರು ಸಭೆ ಸೇರಿ ಭಾರತದ ನಿರ್ಧಾರ ಕುರಿತು ಕಾನೂನು ಕ್ರಮ ಸಾಂವಿಧಾನಿಕ ಚರ್ಚೆ ನಡೆಸಿದರು ಎಂದು ಮೂಲವನ್ನು ಉಲ್ಲೇಖಿಸಿ ವರದಿ ತಿಳಿಸಿದೆ. 

  • ಪಹಲ್ಗಾಮ್‌ನ ಉಗ್ರರ ದಾಳಿ ಕೃತ್ಯವನ್ನು ಬ್ರಿಟನ್‌ ಸಂಸತ್ತು ಖಂಡಿಸಿದೆ. ಭಾರತ –ಪಾಕ್‌ ನಡುವಣ ಉದ್ವಿಗ್ನ ಸ್ಥಿತಿ ಬೆಳವಣಿಗೆ ಕುರಿತು ಲೇಬರ್ ಪಕ್ಷದ ಸರ್ಕಾರ ನಿಲುವು ತಿಳಿಸಬೇಕು ಎಂದೂ ಸದಸ್ಯರು ಆಗ್ರಹಿಸಿದರು. ‘ಪರಿಸ್ಥಿತಿ ಶಮನಕ್ಕೆ ಎಲ್ಲರ ಒಗ್ಗೂಡುವಿಕೆ ಈಗಿನ ಅಗತ್ಯ’ ಎಂದು ಬ್ರಿಟನ್‌ನ ವಿದೇಶಾಂಗ ಸಚಿವೆ ಲಾರ್ಡ್‌ ರೇ ಕಾಲಿನ್ಸ್‌ ಅವರು ತಿಳಿಸಿದರು. 

  • ‘ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕವು ಭಾರತದ ಜೊತೆಗಿದೆ. ಮೋದಿ ಅವರಿಗೆ ನಮ್ಮ ಪೂರ್ಣ ಬೆಂಬಲವಿದೆ ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಮಾರ್ಕ್ ರುಬಿಯೊ ಪುನರುಚ್ಚರಿಸಿದ್ದಾರೆ.

  • ‘ಪಹಲ್ಗಾಮ್‌ ದಾಳಿ ತಡೆಯಬಹುದಾಗಿದ್ದ ಅವಘಡ. ಜನರು ನಿತ್ಯ ತೆರಳುತ್ತಿದ್ದ ಹಾದಿ ತಾಣ ಆಗಿದ್ದರೂ ಭದ್ರತಾ ಸಿಬ್ಬಂದಿ ಇರಲಿಲ್ಲ’ ಎಂದು ಹೂಸ್ಟನ್‌ನ ಇಂಡೊ–ಅಮೆರಿಕ ಕಾಶ್ಮೀರಿ ಫೋರಂ ಸಂಯೋಜಕ ಡಾ.ವಿಜಯ್‌ ಸಜವಾಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.