ADVERTISEMENT

ಭ್ರಷ್ಟಾಚಾರ ಪ್ರಕರಣ: ನವಾಜ್‌ ಷರೀಫ್‌ಗೆ ರಕ್ಷಣಾತ್ಮಕ ಜಾಮೀನು ಮಂಜೂರು

ಪಿಟಿಐ
Published 19 ಅಕ್ಟೋಬರ್ 2023, 12:42 IST
Last Updated 19 ಅಕ್ಟೋಬರ್ 2023, 12:42 IST
ನವಾಜ್ ಷರೀಫ್‌ –ಎಎಫ್‌ಪಿ ಚಿತ್ರ
ನವಾಜ್ ಷರೀಫ್‌ –ಎಎಫ್‌ಪಿ ಚಿತ್ರ   

ಇಸ್ಲಾಮಾಬಾದ್‌: ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಅಕ್ಟೋಬರ್‌ 24ರವರೆಗೆ ರಕ್ಷಣಾತ್ಮಕ ಜಾಮೀನು ಮಂಜೂರು ಮಾಡಿದೆ. 

ಮತ್ತೊಂದೆಡೆ ತೋಷಖಾನ ಪ್ರಕರಣದಲ್ಲಿ ಷರೀಫ್‌ ವಿರುದ್ಧ ಜಾರಿಯಾಗಿದ್ದ ಬಂಧನದ ವಾರಂಟ್‌ ಅನ್ನು ಭ್ರಷ್ಟಾಚಾರ ತಡೆ ನ್ಯಾಯಾಲಯವು ಅಮಾನತಿನಲ್ಲಿಟ್ಟಿದೆ. ಹಾಗಾಗಿ, ನಾಲ್ಕು ವರ್ಷಗಳ ಬಳಿಕ ಲಂಡನ್‌ನಿಂದ ಸ್ವದೇಶಕ್ಕೆ ಮರಳುತ್ತಿರುವ ಅವರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಿದಂತಾಗಿದೆ. 

ತೋಷಖಾನ ಪ್ರಕರಣದಲ್ಲಿ ಷರೀಫ್‌ ಕೋರ್ಟ್‌ಗೆ ಶಾಶ್ವತವಾಗಿ ಗೈರು ಹಾಜರಾಗಿದ್ದರು. ಹಾಗಾಗಿ, ಅವರ ವಿರುದ್ಧ ಬಂಧನದ ವಾರಂಟ್‌ ಹೊರಡಿಸಲಾಗಿತ್ತು. ಇದನ್ನು ಅಮಾನತುಗೊಳಿಸುವಂತೆ ಕೋರಿ ಮಾಜಿ ಪ್ರಧಾನಿ ಪರ ವಕೀಲ ಖಾಜಿ ಮುಶಾಹಿದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಗುರುವಾರ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಹಮ್ಮದ್ ಬಶೀರ್, ‘ಸ್ವದೇಶಕ್ಕೆ ಮರಳುತ್ತಿರುವ ಅವರನ್ನು ಪೊಲೀಸರು ಬಂಧಿಸಬಾರದು. ನ್ಯಾಯಾಲಯದ ಮುಂದೆ ಶರಣಾಗಲು ಅವರಿಗೆ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಅವರಿಗೂ ಮಾಹಿತಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.

ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷದ ಮುಖ್ಯಸ್ಥರಾದ ಷರೀಫ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದೆ. ತೋಷಖಾನ ಪ್ರಕರಣದಲ್ಲಿ ಘೋಷಿತ ಅಪರಾಧಿ ಎಂದು ಪ್ರಕಟಿಸಲಾಗಿದೆ. 2019ರಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಬ್ರಿಟನ್‌ಗೆ ತೆರಳುವುದಕ್ಕೂ ಮೊದಲು ಅವರಿಗೆ ಈ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿತ್ತು.

ಏನಿದು ತೋಷಖಾನ?

‘ತೋಷಖಾನ’ ಎಂಬುದು ಪಾಕಿಸ್ತಾನದ ಉಡುಗೊರೆಗಳ ಭಂಡಾರ. ಇದು  ಕ್ಯಾಬಿನೆಟ್ ವಿಭಾಗದಡಿ ಕಾರ್ಯ ನಿರ್ವಹಿಸುತ್ತದೆ. ವಿದೇಶಿ ನಾಯಕರು ಮತ್ತು ಗಣ್ಯರು ಪಾಕ್‌ನ ಆಡಳಿತಗಾರರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ನೀಡಿದ ಉಡುಗೊರೆಗಳನ್ನು ಇದು ಸಂಗ್ರಹಿಸುತ್ತದೆ. ನಿಯಮಗಳ ಪ್ರಕಾರ ಕ್ಯಾಬಿನೆಟ್ ವಿಭಾಗಕ್ಕೆ ಅಂತಹ ಉಡುಗೊರೆಗಳು ಮತ್ತು ವಸ್ತುಗಳ ಬಗ್ಗೆ ವರದಿ ಮಾಡುವುದು ಕಡ್ಡಾಯ. ಪ್ರಧಾನಿ ಅಥವಾ ಅಧ್ಯಕ್ಷರು ₹ 30 ಸಾವಿರಕ್ಕಿಂತಲೂ ಕಡಿಮೆ ಮೊತ್ತದ ಉಡುಗೊರೆಗಳು ಅಥವಾ ವಸ್ತುಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳಬಹುದು. ದುಬಾರಿ ಮೌಲ್ಯದ ವಸ್ತುಗಳನ್ನು ಭಂಡಾರದ ಸುಪರ್ದಿಗೆ ನೀಡಬೇಕು ಎಂದು ಪಾಕ್‌ ಕಾನೂನು ಹೇಳುತ್ತದೆ. ರಿಯಾಯಿತಿ ದರದಡಿ ತೋಷಖಾನದಿಂದ ವಾಹನ ಪಡೆದ ಆರೋಪ ಷರೀಫ್‌ ಅವರ ಮೇಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.