ಜರ್ದಾರಿ
ಕರಾಚಿ: ಇಡೀ ಜಗತ್ತನ್ನೇ ನಡುಗಿಸಿದ್ದ ಕೋವಿಡ್ ಸಾಂಕ್ರಾಮಿಕ ಮರೆಯಾಯಿತು ಎನ್ನುವಷ್ಟರಲ್ಲಿ ಆಗೊಂದು ಹೀಗೊಂದು ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.
ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಅವರನ್ನು ಪ್ರತ್ಯೇಕವಾಸದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರ ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ನವಾಬ್ ಶಾನಿಂದ ಕರಾಚಿಗೆ ಆಗಮಿಸಿದ 69 ವರ್ಷದ ಜರ್ದಾರಿಗೆ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಜರ್ದಾರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದಾಗಿ ಅವರ ವೈದ್ಯ ಡಾ. ಆಸಿಮ್ ಹುಸೇನ್ ತಿಳಿಸಿದ್ದಾರೆ.
ಹಲವು ಪರೀಕ್ಷೆಗಳ ನಂತರ ಅವರಿಗೆ ಕೋವಿಡ್ ದೃಢಪಟ್ಟಿದೆ. ಅವರನ್ನು ಈಗ ಪ್ರತ್ಯೇಕವಾಗಿ ಇರಿಸಲಾಗಿದ್ದು, ಅವರ ಆರೋಗ್ಯವನ್ನು ದಿನದ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತಜ್ಞರ ತಂಡವು ಅಧ್ಯಕ್ಷರನ್ನು ನೋಡಿಕೊಳ್ಳುತ್ತಿದೆ ಮತ್ತು ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಹುಸೇನ್ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಜರ್ದಾರಿ ಸೋಮವಾರ ಈದ್ ಪ್ರಾರ್ಥನೆ ಸಲ್ಲಿಸಲು ನವಾಬ್‌ಶಾಗೆ ಹೋಗಿದ್ದರು. ಅದಕ್ಕೂ ಮೊದಲು ಭಾನುವಾರ ತಮ್ಮ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಜರ್ದಾರಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಹಿಂದೆ 2022ರ ಜುಲೈನಲ್ಲೂ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು.
2024ರ ಅಕ್ಟೋಬರ್‌ನಲ್ಲಿ ವಿಮಾನದಿಂದ ಇಳಿಯುವಾಗ ಅವರ ಪಾದದ ಮೂಳೆ ಮುರಿದಿತ್ತು. 2023 ರ ಮಾರ್ಚ್‌ನಲ್ಲಿ ಜರ್ದಾರಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.