ಪಾಕ್–ಅಫ್ಗನ್ ಗಡಿಯ ಶೋರಾಬಕ್ ಜಿಲ್ಲೆಯ ಮಝಲ್ ಎಂಬಲ್ಲಿ ತಾಲಿಬಾನ್ ಭದ್ರತಾ ಪಡೆಗಳು ಭಾನುವಾರ ಗಸ್ತು ನಡೆಸಿದವು –
ಇಸ್ಲಾಮಾಬಾದ್/ ಪೆಶಾವರ: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪಡೆಗಳು ಶನಿವಾರ ರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೆ ಭಾರಿ ಸಂಘರ್ಷ ನಡೆಸಿದ್ದು, ಗಡಿಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಅಫ್ಗನ್ ಪಡೆಗಳು ನಡೆಸಿದ ‘ಅಪ್ರಚೋದಿತ’ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ಅಫ್ಗನ್‌ನ 19 ಗಡಿ ಭದ್ರತಾ ಠಾಣೆಗಳು ಮತ್ತು ‘ಭಯೋತ್ಪಾದಕರ ಅಡಗುತಾಣಗಳನ್ನು’ ವಶಪಡಿಸಿಕೊಂಡಿದೆ ಎಂದು ಪಾಕ್ ಸೇನೆಯ ಮೂಲಗಳು ಭಾನುವಾರ ತಿಳಿಸಿವೆ. ಸಾವು–ನೋವಿನ ಬಗ್ಗೆ ಎರಡೂ ಕಡೆಯವರು ಭಿನ್ನ ಹೇಳಿಕೆ ನೀಡಿದ್ದಾರೆ.
ತಾನು ನಡೆಸಿದ ಪ್ರತೀಕಾರದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 58 ಸೈನಿಕರು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಗಾನಿಸ್ತಾನ ಹೇಳಿಕೊಂಡಿದೆ. ತನ್ನ 9 ಯೋಧರು ಹುತಾತ್ಮರಾಗಿರುವುದಾಗಿಯೂ ತಿಳಿಸಿದೆ.
ಆದರೆ, ಸಂಘರ್ಷದಲ್ಲಿ ತನ್ನ 23 ಯೋಧರು ಮೃತಪಟ್ಟಿರುವುದಾಗಿ ಪಾಕಿಸ್ತಾನ ಹೇಳಿದೆ. ಅಫ್ಗಾನಿಸ್ತಾನದ ಕಡೆಯಲ್ಲಿ ತಾಲಿಬಾನ್ ಹೋರಾಟಗಾರರು ಒಳಗೊಂಡಂತೆ 200ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದಿದೆ.
ಅಫ್ಗನ್ ಪಡೆಗಳು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿನ ಅಂಗೂರ್ ಅಡ್ಡಾ, ಬಾಜೌರ್, ಖುರ್‍ರಂ , ದೀರ್ ಮತ್ತು ಚಿತ್ರಾಲ್ ಹಾಗೂ ಬಲೂಚಿಸ್ತಾನದ ಬರಾಮ್ಚದಲ್ಲಿರುವ ಪಾಕಿಸ್ತಾನ ಸೇನೆಯ ಠಾಣೆಗಳನ್ನು ಗುರಿಯಾಗಿಸಿವೆ.
ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಗಡಿ ಭದ್ರತಾ ಠಾಣೆಗಳ ಮೇಲಿನ ತಾಲಿಬಾನ್ ದಾಳಿಯನ್ನು ‘ಅಪ್ರಚೋದಿತ’ ಎಂದು ಹೇಳಿದ್ದು, ‘ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಅಫ್ಗನ್ ಪಡೆಗಳು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿರುವುದು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಕ್ ಪಡೆಗಳು ತಕ್ಷಣದ ಮತ್ತು ಪರಿಣಾಮಕಾರಿ ಪ್ರತ್ಯುತ್ತರ ನೀಡಿದ್ದು, ಯಾವುದೇ ಪ್ರಚೋದನೆಯನ್ನು ಸಹಿಸುವುದಿಲ್ಲ’ ಎಂದಿದ್ದಾರೆ.
ಪಾಕ್ ಸೇನೆ ದಾಳಿ ನಡೆಸಿರುವುದನ್ನು ತಾಲಿಬಾನ್ ಆಡಳಿತದ ರಕ್ಷಣಾ ಸಚಿವಾಲಯ ದೃಢಪಡಿಸಿದೆ. ಅದಕ್ಕೆ ಪ್ರತಿಯಾಗಿ ತನ್ನ ಪಡೆಗಳು ‘ಪ್ರತೀಕಾರದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿವೆ’ ಎಂದು ಹೇಳಿದೆ.
‘ಪಾಕಿಸ್ತಾನವು ಮತ್ತೊಮ್ಮೆ ಅಫ್ಗಾನಿಸ್ತಾನದ ಬೌಗೋಳಿಕ ಸಮಗ್ರತೆಯನ್ನು ಉಲ್ಲಂಘಿಸಿದರೆ, ನಾವು ಸುಮ್ಮನಿರುವುದಿಲ್ಲ. ನಮ್ಮ ಸಶಸ್ತ್ರ ಪಡೆಗಳು ದೇಶದ ಗಡಿಯನ್ನು ರಕ್ಷಿಸಲು ಸಂಪೂರ್ಣ ಸಿದ್ಧವಾಗಿದ್ದು, ತಕ್ಕ ಪ್ರತಿಕ್ರಿಯೆ ನೀಡಲಿವೆ’ ಎಂದು ತಿಳಿಸಿದೆ.
‘ಗಡಿಯುದ್ದಕ್ಕೂ ಪಾಕಿಸ್ತಾನದ 20 ಭದ್ರತಾ ಠಾಣೆಗಳನ್ನು ನಾಶಪಡಿಸಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದೇವೆ. ಕತಾರ್ ಮತ್ತು ಸೌದಿ ಅರೇಬಿಯಾದ ಮನವಿಯ ಮೇರೆಗೆ ಕಾರ್ಯಾಚರಣೆಯನ್ನು ಮಧ್ಯರಾತ್ರಿ ನಿಲ್ಲಿಸಲಾಯಿತು’ ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ.
ಸಂಘರ್ಷದ ಬೆನ್ನಲ್ಲೇ ಗಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಉಭಯ ದೇಶಗಳ ನಡುವಿನ ಸಂಪರ್ಕ ಸ್ಥಗಿತಗೊಂಡಿದೆ. ಗಡಿಯ ಎರಡೂ ಕಡೆಗಳಲ್ಲಿ ಹೆಚ್ಚಿನ ಯೋಧರನ್ನು ನಿಯೋಜಿಸಲಾಗಿದೆ.
ಅಫ್ಗಾನಿಸ್ತಾನದ ಪ್ರಚೋದನೆಯನ್ನು ಬಲವಾಗಿ ಖಂಡಿಸುತ್ತೇನೆ. ಪ್ರತಿಯೊಂದು ಪ್ರಚೋದನೆಗೂ ಪಾಕಿಸ್ತಾನವು ಬಲವಾದ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ನೀಡಲಿದೆ
–ಶೆಹಬಾಜ್ ಷರೀಫ್ ಪಾಕ್ ಪ್ರಧಾನಿ
ಸಂಘರ್ಷಕ್ಕೆ ಏನು ಕಾರಣ?
* ಗುರುವಾರ ರಾತ್ರಿ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಹಲವೆಡೆ ಭಾರಿ ಸ್ಫೋಟ ಕೇಳಿಬಂದಿತ್ತು * ಪಾಕ್ ಪಡೆಗಳು ಕಾಬೂಲ್ ಮೇಲೆ ವಾಯು ದಾಳಿ ನಡೆಸಿವೆ ಎಂದು ಅಫ್ಗಾನಿಸ್ತಾನ ಆರೋಪಿಸಿದೆ * ಆದರೆ ದಾಳಿ ನಡೆಸಿದ್ದನ್ನು ದೃಢಪಡಿಸಲು ಅಥವಾ ತನ್ನ ಪಾತ್ರವನ್ನು ಅಲ್ಲಗಳೆಯಲು ಪಾಕ್ ಸೇನೆ ನಿರಾಕರಿಸಿದೆ * ಕಾಬೂಲ್ ಮೇಲಿನ ದಾಳಿಗೆ ಪ್ರತಿಯಾಗಿ ಅಫ್ಗನ್ ಪಡೆಗಳು ಶನಿವಾರ ರಾತ್ರಿ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿವೆ * ತಿರುಗೇಟು ನೀಡಿದ ಪಾಕ್ ಪಡೆಗಳು ಗಡಿಯಲ್ಲಿರುವ ಅಫ್ಗನ್ ಗಡಿ ಭದ್ರತಾ ಠಾಣೆಗಳನ್ನು ವಶಪಡಿಸಿಕೊಂಡಿವೆ * ತೆಹ್ರೀಕ್ ಎ ತಾಲಿಬಾನ್ ಸಂಘಟನೆಯು ಅಫ್ಗನ್ ನೆಲ ಬಳಸಿಕೊಂಡು ಪಾಕಿಸ್ತಾನದ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟಿದೆ
‘ಶಾಂತಿಯುತ ಪರಿಹಾರ ಬಯಸುವೆವು’
ನವದೆಹಲಿ: ಅಫ್ಗಾನಿಸ್ತಾನವು ಪಾಕಿಸ್ತಾನದೊಂದಿಗಿನ ಪ್ರಸ್ತುತ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಬಯಸುತ್ತದೆ ಎಂದು ಭಾರತ ಪ್ರವಾಸದಲ್ಲಿರುವ ಅಫ್ಗನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಹೇಳಿದ್ದಾರೆ. ‘ಯಾವುದೇ ಬಾಹ್ಯ ಅಕ್ರಮಣವನ್ನು ಎದುರಿಸಲು ನಮ್ಮ ದೇಶ ಒಗ್ಗಟ್ಟಾಗಿದೆ. ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸುವ ಪ್ರಯತ್ನಗಳು ವಿಫಲವಾದರೆ ನಾವು ಪರ್ಯಾಯ ಮಾರ್ಗ ಅನುಸರಿಸಬೇಕಾಗುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.