
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಲ್ಲಿ ಮಂಗಳವಾರ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ ಹಾನಿಯಾಗಿರುವ ವಾಹನಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುತ್ತಿರುವುದು
-ಪಿಟಿಐ ಚಿತ್ರ
ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅರೆ ಸೇನಾಪಡೆ ಕಚೇರಿ ಬಳಿ ಮಂಗಳವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಲೂಚಿಸ್ತಾನ ರಾಜಧಾನಿ ಕ್ವೆಟ್ಟಾದಲ್ಲಿರುವ ಅರೆ ಸೇನಾಪಡೆಗಳ ಕೇಂದ್ರ ಕಚೇರಿಯ ಸಮೀಪದ ಜನನಿಬಿಡ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಬಳಿಕ ಕೆಲವು ಶಸ್ತ್ರಧಾರಿಗಳು ಸೇನಾ ಕೇಂದ್ರ ಕಚೇರಿಗೂ ನುಗ್ಗಿ, ಅರೆ ಸೇನಾಪಡೆ ಸಿಬ್ಬಂದಿಯನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಮಿರ್ ಸರ್ಫರಾಜ್ ಬುಗ್ತಿ ಹೇಳಿದ್ದಾರೆ.
ಆತ್ಮಾಹುತಿ ದಾಳಿಕೋರ ಪಿಕಪ್ ಟ್ರಕ್ ಚಲಾಯಿಸುತ್ತಿದ್ದ. ನಂತರ ನಡೆದ ಗುಂಡಿನ ಚಕಮಕಿಯ ಆತನ ಜತೆಗಿದ್ದ ಉಳಿದ ನಾಲ್ವರು ದಾಳಿಕೋರರನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ ಎಂದೂ ಬುಗ್ತಿ ತಿಳಿಸಿದ್ದಾರೆ.
ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿ ಸೇರಿದ್ದಾರೆ ಎಂದೂ ಬುಗ್ತಿ ಹೇಳಿದ್ದಾರೆ.
ಸರ್ಕಾರದ ಯೋಜನೆಗಳು, ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಕಾಮಗಾರಿಯನ್ನು ಬಲೂಚ್‌ನಲ್ಲಿರುವ ಬಂಡುಕೋರರ ಗುಂಪುಗಳು ವಿರೋಧಿಸುತ್ತಲೇ ಇದ್ದು, ಆಗಾಗ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸುತ್ತಲೇ ಇರುತ್ತವೆ. ಆದರೆ, ಈ ಬಾರಿಯ ಆತ್ಮಾಹುತಿ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತಿಕೊಂಡಿಲ್ಲ.
‘ಹೇಡಿ ಕೃತ್ಯ’: ಬಾಂಬ್ ದಾಳಿಯನ್ನು ಬುಗ್ತಿ ಖಂಡಿಸಿದ್ದು, ಕೃತ್ಯವನ್ನು ‘ಭಯೋತ್ಪಾದಕ ದಾಳಿ’ ಎಂದು ಕರೆದಿದ್ದಾರೆ.
‘ಈ ರೀತಿಯ ಹೇಡಿ ಕೃತ್ಯಗಳನ್ನು ಎಸಗುವ ಮೂಲಕ ದೇಶದ ದೃಢಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಈ ದೇಶದ ನಾಗರಿಕರ ಮತ್ತು ಸೇನಾ ಸಿಬ್ಬಂದಿಯ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಬಲೂಚಿಸ್ತಾನದಲ್ಲಿ ಶಾಂತಿ ಮತ್ತು ರಕ್ಷಣೆ ಖಾತರಿಪಡಿಸಲು ನಾವು ಬದ್ಧರಾಗಿದ್ದೇವೆ’ ಎಂದಿದ್ದಾರೆ.
‘ಬಾಂಬ್ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದು 32 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಪ್ರಾಂತ್ಯದ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ತಿಳಿಸಿದ್ದಾರೆ. ಕ್ವೆಟ್ಟಾ ಸಿವಿಲ್ ಆಸ್ಪತ್ರೆ ಬಲೂಚಿಸ್ತಾನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ವಿವಿಧ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.