ADVERTISEMENT

ಅಫ್ಗಾನ್‌ ಶಾಂತಿ ಸ್ಥಾಪನೆಗೆ ನೆರವು ಹೊರತು ಖಾತರಿದಾರ ಅಲ್ಲ: ಪಾಕಿಸ್ತಾನ ಹೇಳಿಕೆ

ಪಿಟಿಐ
Published 11 ಜುಲೈ 2021, 7:37 IST
Last Updated 11 ಜುಲೈ 2021, 7:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್: ‘ಅಫ್ಗಾನಿಸ್ತಾನದಲ್ಲಿ ಅಂತರ್ಯುದ್ಧ ನಡೆದರೆ, ಅದರಿಂದ ಉಂಟಾಗುವ ಪರಿಣಾಮವನ್ನು ಎದುರಿಸಲು ಪಾಕಿಸ್ತಾನ ಸಿದ್ಧವಿದೆ’ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ಶನಿವಾರ ತಿಳಿಸಿದರು.

‘ಅಫ್ಗಾನ್‌ನ ಶೇಕಡ 85 ರಷ್ಟು ಭೂಪ್ರದೇಶ ತನ್ನ ಹಿಡಿತದಲ್ಲಿದೆ’ ಎಂದು ತಾಲಿಬಾನ್‌ ಹೇಳಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮೇಜರ್‌ ಜನರಲ್‌ ವಕ್ತಾರಬಾಬರ್‌ ಇಫ್ತಿಕಾರ್‌ ಸ್ಥಳೀಯ ಮಾಧ್ಯಮಕ್ಕೆ ಈ ಹೇಳಿಕೆ ನೀಡಿದ್ಧಾರೆ.

‘ಪಾಕಿಸ್ತಾನವು ಅಫ್ಗಾನ್‌ನಲ್ಲಿ ಶಾಂತಿ ಸ್ಥಾಪಿಸಲು ನೆರವಾಗಬಹುದೇ ಹೊರತು ಶಾಂತಿ ಸ್ಥಾಪನೆ ಬಗ್ಗೆ ಖಾತರಿದಾರನಾಗಿರಲು ಸಾಧ್ಯವಿಲ್ಲ. ನಾವು ಅಫ್ಗಾನ್‌ನ ಯಾವುದೇ ಬಣದ ಪರವಾಗಿಲ್ಲ. ಅಫ್ಗಾನ್‌ ತನ್ನ ನಾಯಕತ್ವವನ್ನು ಆರಿಸಬೇಕು’ ಎಂದು ಬಾಬರ್‌ ಇಫ್ತಿಕಾರ್‌ ಅಭಿ‍ಪ್ರಾಯಪಟ್ಟರು.

ADVERTISEMENT

‘ಅಫ್ಗಾನ್‌ನೊಂದಿಗಿನ ಗಡಿಯಲ್ಲಿ ಬಿಗಿ ಭದ್ರತೆ ಇದೆ. ಅಫ್ಗಾನಿಸ್ತಾನದೊಂದಿಗಿನ 2,611 ಕಿ.ಮೀ ಉದ್ದದ ಗಡಿಯಲ್ಲಿ ಬೇಲಿ ಹಾಕುವ ಪ್ರಕ್ರಿಯೆ ಶೇಕಡ 90ರಷ್ಟು ಪೂರ್ಣಗೊಂಡಿದೆ. ಪಾಕಿಸ್ತಾನವು ಅಂತರ್ಯುದ್ಧದ ಪರಿಣಾಮವನ್ನು ಎದುರಿಸಲು ಸಿದ್ಧವಾಗಿದೆ. ಪ್ರಸ್ತುತ ಗಡಿ ಭದ್ರತಾ ಕಾರ್ಯವಿಧಾನವು ಮೊದಲಿಗಿಂತ ಉತ್ತಮವಾಗಿದೆ’ ಎಂದು ಅವರು ತಿಳಿಸಿದರು.

‘ಅಫ್ಗಾನಿಸ್ತಾನದಿಂದ ನಿರಾಶ್ರಿತರು ಪಾಕಿಸ್ತಾನಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಆಂತರಿಕ ಸಚಿವಾಲಯವು ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ’ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಭಾರತದ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು,‘ ಪಾಕಿಸ್ತಾನದ ಹಿತಾಸಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಭಾರತವು ಅಫ್ಗಾನ್‌ನಲ್ಲಿ ಹೂಡಿಕೆ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.