ಲಾಹೋರ್:ಪಾಕಿಸ್ತಾನದಲ್ಲಿ ಬುಧವಾರ ಕೋವಿಡ್ ಪ್ರಕರಣಗಳು ಮತ್ತಷ್ಟು ಏರಿಕೆಯಾಗಿವೆ.ಕಳೆದ ಮೂರು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಇಲ್ಲಿಯವರೆಗೆ 2,238 ಪ್ರಕರಣಗಳು ವರದಿಯಾಗಿವೆ.31 ಮಂದಿಪ್ರಾಣ ಕಳೆದುಕೊಂಡಿದ್ದಾರೆ.
ಇರಾನ್ ಗಡಿ ಪ್ರದೇಶತಫ್ತಾನ್‌ನಲ್ಲಿರುವ ಕ್ವಾರಂಟೈನ್ ಶಿಬಿರದಲ್ಲಿ ಶುಚಿತ್ವದ ಕೊರತೆ ಮತ್ತು ಸರಿಯಾದ ತಪಾಸಣೆ ನಡೆಯದೇ ಇರುವುದರಿಂದ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಅದೇ ವೇಳೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ಇರಾನ್ ಕಳವಳ ವ್ಯಕ್ತ ಪಡಿಸಿದೆ.
ಕೆಲವಡೆ ಮಾತ್ರ ಲಾಕ್‌ಡೌನ್ ಆದೇಶ ಪಾಲನೆಯಾಗಿದ್ದು ಅಲ್ಲಿ ಮಾತ್ರ ಸೋಂಕು ಹರಡುವಿಕೆ ಕಡಿಮೆಯಾಗಿದೆ. ಇಲ್ಲಿನ ಜನರು ಆಡಳಿತಾಧಿಕಾರಿಗಳ ಮಾತನ್ನು ಪಾಲಿಸಲು ನಿರಾಕರಿಸುತ್ತಿರುವುದು ಕೂಡಾ ಸೋಂಕು ಹರಡುವುದಕ್ಕೆ ಕಾರಣ.ತುರ್ತು ಸಂದರ್ಭಗಳಲ್ಲಿ ಮಾತ್ರ ಹೊರಗೆ ಹೋಗಿ. ಮನೆಯೊಳಗೇ ಇರಿ ಎಂದು ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರೂ ಜನರು ಕಿವಿಗೊಡುತ್ತಿಲ್ಲ. ಕೆಲವೊಂದು ನಗರಗಳಲ್ಲಿ ಓಡಾಡುತ್ತಿರುವ ಜನರನ್ನು ಭದ್ರತಾ ಸಿಬ್ಬಂದಿಗಳು ತಡೆದು ಮನೆಗೆ ಕಳುಹಿಸುತ್ತಿರುವುರಿಂದ ಅಲ್ಲಿನ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿ ಹರಡಿಲ್ಲ.
ವರದಿಗಳ ಪ್ರಕಾರ ದೇಶದಲ್ಲಿ ಕೋವಿಡ್ ರೋಗ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ ಮಸೀದಿಗಳು ಮುಚ್ಚಿಲ್ಲ. ಕಳೆದ ತಿಂಗಳು ಪಾಕಿಸ್ತಾನದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ 2,50,000 ಜನರು ಪಾಲ್ಗೊಂಡಿದ್ದರು.
ಸೌದಿ ಅರೇಬಿಯಾ ಮತ್ತು ಇರಾನ್‌ನಲ್ಲಿ ಮಸೀದಿಗಳು ಮುಚ್ಚಿದ್ದರೂ, ಪಾಕಿಸ್ತಾನ ಇಲ್ಲಿಯವರೆಗೆ ಆ ನಿರ್ಧಾರ ಕೈಗೊಂಡಿಲ್ಲ. 110 ದಶಲಕ್ಷ ಜನರಿರುವ ಪಂಜಾಬ್ ಪ್ರಾಂತ್ಯದ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಈಗಲೂ ನಡೆದು ಬರುತ್ತಿದೆ. ಸಿಂಧ್ ಮತ್ತು ಬಲೂಚಿಸ್ತಾನ್ ಬಿಟ್ಟರೆ ಬೇರೆ ಯಾವುದೇ ಪ್ರಾಂತೀಯ ಸರ್ಕಾರಗಳು ಆರಾಧನಾಲಯಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿಲ್ಲ.
ಪಾಕಿಸ್ತಾನ ಸರ್ಕಾರದ ಬೇಜವಾಬ್ದಾರಿತನದ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತ ಪಡಿಸಿವೆ.
ದೇಶವನ್ನು ಸಂಪೂರ್ಣವಾಗಿ ಮುಚ್ಚ ಬೇಕೊ ಇಲ್ಲವೋ ಎಂಬುದರ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ.ಇನ್ನಷ್ಟು ವಿಳಂಬ ಮಾಡದೆತಕ್ಷಣವೇ ಸಂಪೂರ್ಣಲಾಕ್‌ಡೌನ್ ಮಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ ನಾಯಕ ಮತ್ತು ಮಾಜಿ ಪ್ರಧಾನಿ ಶಹೀದ್ ಖಾಖನ್ ಅಬ್ಬಾಸಿ ಹೇಳಿದ್ದಾರೆ.
ಏತನ್ಮಧ್ಯೆ, ಕೊರೊನಾ ವೈರಸ್ ವಿರುದ್ಧ ಹೋರಾಟ ನಂಬಿಕೆಯ ಶಕ್ತಿಯಿಂದಲೇ ಸಾಧ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ದೇಶದಲ್ಲಿ ಲಾಕ್‌ಡೌನ್ ಘೋಷಿಸಬೇಕೋ ಬೇಡವೋ ಎಂಬುದರ ಬಗ್ಗೆ ಪ್ರಧಾನಿ ಗೊಂದಲದಲ್ಲಿದ್ದಾರೆ ಎಂದು ಜಮಾತ್ ಇ ಇಸ್ಲಾಮಿಯ ಪ್ರಧಾನ ಕಾರ್ಯದರ್ಶಿ ಲಿಯಾಖತ್ ಬಲೋಚ್ ಹೇಳಿಕೆಯನ್ನು ಪಾಕ್ ಮಾಧ್ಯಮಗಳು ಉಲ್ಲೇಖಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.