ADVERTISEMENT

ಆತ್ಮವಿಮರ್ಶೆ ಮಾಡಿಕೊಳ್ಳಿ: ಪಾಕಿಸ್ತಾನಕ್ಕೆ ಭಾರತ ಸಲಹೆ

ಪಿಟಿಐ
Published 8 ಜುಲೈ 2020, 10:45 IST
Last Updated 8 ಜುಲೈ 2020, 10:45 IST
ಪಾಕ್- ಭಾರತ ಧ್ವಜ
ಪಾಕ್- ಭಾರತ ಧ್ವಜ   

ವಿಶ್ವ ಸಂಸ್ಥೆ: ‘ಪಾಕಿಸ್ತಾನವನ್ನು ಭಯೋತ್ಪಾದನೆಯ ಅಂತರರಾಷ್ಟ್ರೀಯ ಕೇಂದ್ರ, ಭಯೋತ್ಪಾದಕರ ಸುರಕ್ಷಿತ ಸ್ವರ್ಗ’ ಎಂದು ವಿಶ್ವವೇ ಒಪ್ಪಿಕೊಂಡಿರುವುದು ಯಾಕೆ ಎಂಬ ಬಗ್ಗೆ ಆ ದೇಶ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಭಾರತ ಹೇಳಿದೆ.

ಭಯೋತ್ಪಾದನೆ ನಿಗ್ರಹ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ‘ಭಯೋತ್ಪಾದನೆಯ ಜಾಗತಿಕ ಉಪಟಳ’ ಕುರಿತ ವೆಬಿನಾರ್‌ನಲ್ಲಿ, ಭಾರತವನ್ನು ಪ್ರತಿನಿಧಿಸಿದ ತಂಡದ ನಾಯಕ ಮಹಾವೀರ್‌ ಸಿಂಘ್ವಿ ಅವರು ಬುಧವಾರ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕೊರೊನಾ ಪಿಡುಗಿನ ವಿರುದ್ಧ ಹೋರಾಡಲು ಜಗತ್ತೇ ಒಂದಾಗುತ್ತಿದ್ದರೆ, ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನವು ಪ್ರತಿ ಅವಕಾಶವನ್ನೂ ಭಾರತದ ವಿರುದ್ಧ ಆಧಾರರಹಿತ, ದುರುದ್ದೇಶಪೂರಿತ ಸುಳ್ಳು ಆರೋಪಗಳನ್ನು ಮಾಡಲು ಬಳಸಿಕೊಳ್ಳುತ್ತಿದೆ ಮತ್ತು ನಮ್ಮ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದೆ’ ಎಂದಿದ್ದಾರೆ.

ADVERTISEMENT

ತನ್ನ ಭೂಪ್ರದೇಶದಲ್ಲಿದ್ದುಕೊಂಡು ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಸಮುದಾಯ ಒತ್ತಾಯಿಸಬೇಕು.

ಭಾರತದ ಮೇಲೆ ನಡೆಸುವ ಭಯೋತ್ಪಾದನಾ ಕೃತ್ಯವನ್ನು ‘ಸ್ವಾತಂತ್ರ್ಯ ಹೋರಾಟ’ ಎಂದು ಬಣ್ಣಿಸಿ, ಅಂಥ ಸಂಘಟನೆಗಳಿಗೆ ಪಾಕಿಸ್ತಾನವು ಸೇನಾ, ಆರ್ಥಿಕ ಹಾಗೂ ಇತರ ಎಲ್ಲಾ ನೆರವುಗಳನ್ನು ನೀಡುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಆ ದೇಶವನ್ನು ಗಂಭೀರವಾಗಿ ಪರಿಗಣಿಸಬೇಕಾದರೆ, ದ್ವಿಮುಖ ನೀತಿಯನ್ನು ಮೊದಲು ಬಿಟ್ಟುಬಿಡಬೇಕು ಮತ್ತು ಆ ದಿಕ್ಕಿನಲ್ಲಿ ಬದ್ಧತೆ ಪ್ರದರ್ಶಿಸಬೇಕು ಎಂದಿದ್ದಾರೆ.

‘ಇತರರ ವಿರುದ್ಧ ಆರೋಪಗಳನ್ನು ಮಾಡುವ ಪಾಕಿಸ್ತಾನವು, ತನ್ನ ನೆಲವಾದ ಬಲೂಚಿಸ್ತಾನ, ಖೈಬರ್‌ ಪಖ್ತುಂಖ್ವಾ ಹಾಗೂ ತಾನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವ ಜಮ್ಮು ಕಾಶ್ಮೀರದ ಪ್ರದೇಶದಲ್ಲಿ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಕುರುಡು ಧೋರಣೆ ಅನುಸರಿಸಿದೆ. ದೇಶದೊಳಗಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಲ್ಪಸಂಖ್ಯಾತರ ವಿರುದ್ಧ ಭೇದಭಾವ ಮಾಡುತ್ತಿದೆ. ಆ ದೇಶದಲ್ಲಿ ಒತ್ತಾಯದ ಮತಾಂತರ, ಅಹಮದೀಯ, ಕ್ರೈಸ್ತ, ಹಿಂದೂ, ಸಿಖ್‌ ಮುಂತಾದ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಯುತ್ತಿರುವುದು ಜಗತ್ತಿಗೇ ಗೊತ್ತಿರುವ ವಿಚಾರ ಎಂದು ಸಿಂಘ್ವಿ ಹೇಳಿದ್ದಾರೆ.

‘ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಆಯ್ಕೆಯಾಗಿರುವ ಭಾರತ ಸರ್ಕಾರವನ್ನು ಟೀಕಿಸುವುದಕ್ಕೂ ಮುನ್ನ ಪಾಕಿಸ್ತಾನವು ತನ್ನ ದೇಶದ ಸ್ಥಿತಿಗತಿಯ ಬಗ್ಗೆ ಗಮನಹರಿಸುವುದು ಅಗತ್ಯ. ತನ್ನ ನೆಲದಿಂದ ಅಲ್‌ಕೈದಾ ಸಂಘಟನೆಯನ್ನು ಕೊನೆಗೊಳಿಸಿರುವುದರ ಶ್ರೇಯಸ್ಸು ತನ್ನದೇ ಎಂದು ಪಾಕಿಸ್ತಾನ ಬೀಗುತ್ತಿರುವುದೂ ವಿರೋಧಾಭಾಸವಾಗಿದೆ. ಆ ದೇಶದ ಪ್ರಧಾನಿಯೇ ಇತ್ತೀಚೆಗೆ ಸಂಸತ್ತಿನಲ್ಲಿ ಒಸಾಮ ಬಿನ್‌ ಲಾಡೆನ್‌ನನ್ನು ‘ಹುತಾತ್ಮ’ ಎಂದು ವೈಭವೀಕರಿಸಿರುವುದು ಆ ಆದೇಶದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದೆ. ನಮ್ಮ ದೇಶದಲ್ಲಿ 40,000 ಭಯೋತ್ಪಾದಕರು ಇದ್ದಾರೆ ಎಂಬುದನ್ನು ಪ್ರಧಾನಿ ಇಮ್ರಾನ್‌ ಖಾನ್‌ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಎಂಥ ಪ್ರೋತ್ಸಾಹ ಸಿಗುತ್ತದೆ ಎಂಬುದಕ್ಕೆ ಅವರ ಹೇಳಿಕೆಗಳು ಸ್ಪಷ್ಟ ನಿದರ್ಶನ’ ಎಂದು ಸಿಂಘ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.