ADVERTISEMENT

ಭಾರತದ ಬೆನ್ನಲ್ಲೇ ವಿದೇಶಗಳಿಗೆ ನಿಯೋಗ ಕಳುಹಿಸಲು ಮುಂದಾದ ಪಾಕ್

ಪಿಟಿಐ
Published 18 ಮೇ 2025, 6:12 IST
Last Updated 18 ಮೇ 2025, 6:12 IST
ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್   

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ಬಹಿರಂಗಪಡಿಸಲು ಮತ್ತು ಭಯೋತ್ಪಾದನೆ ಹತ್ತಿಕ್ಕುವ ತನ್ನ ಸಂಕಲ್ಪವನ್ನು ವಿಶ್ವದ ಮುಂದಿಡಲು ಭಾರತವು ಸರ್ವ ಪಕ್ಷಗಳ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸುವ ರಾಜತಾಂತ್ರಿಕ ಕಾರ್ಯಾಚರಣೆ ಆರಂಭಿಸಿರುವ ಬೆನ್ನಲ್ಲೇ ಪಾಕಿಸ್ತಾನ ಕೂಡ ಇದೇ ಮಾರ್ಗವನ್ನು ಹಿಡಿದಿದೆ.

’ನಮ್ಮ ದೇಶದ ನಿಲುವನ್ನು ಮನವರಿಕೆ ಮಾಡಿಕೊಡಲು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಾಜತಾಂತ್ರಿಕ ನಿಯೋಗ ಕಳುಹಿಸುತ್ತೇವೆ‘ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಶನಿವಾರ ಪ್ರಕಟಿಸಿದ್ದಾರೆ. ಅಲ್ಲದೆ, ನಿಯೋಗದ ನಾಯಕತ್ವವನ್ನು ಬಿಲಾವಲ್ ಭುಟ್ಟೊ ಅವರಿಗೆ ವಹಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ‘ಆಪರೇಷನ್ ಸಿಂಧೂರ’ದ ನಂತರ ಭಯೋತ್ಪಾದನೆಯ ವಿರುದ್ಧ ತನ್ನ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರಲು ಭಾರತ ಮುಂದಾಗಿದೆ. ಇದಕ್ಕಾಗಿ ಈ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಸೇರಿ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಸರ್ವಪಕ್ಷ ನಿಯೋಗಗಳನ್ನು ಕಳುಹಿಸುತ್ತಿದೆ. ಭಾರತ ಸರ್ಕಾರ ಈ ನಿರ್ಧಾರವನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವು ತನ್ನ ನಿಯೋಗ ಕಳುಹಿಸುವ ನಿರ್ಧಾರ ಪ್ರಕಟಿಸಿತು.

ADVERTISEMENT

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಮತ್ತು ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯ ನಂತರ ಪ್ರಧಾನಿ ಶೆಹಬಾಜ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿದೆ. 

‘ಭಾರತದ ಅಪಪ್ರಚಾರ ಬಹಿರಂಗಪಡಿಸಲು ಪ್ರಧಾನಿ ಶೆಹಬಾಜ್ ಅವರು ವಿಶ್ವದ ಪ್ರಮುಖ ರಾಜಧಾನಿಗಳಿಗೆ ಉನ್ನತ ಮಟ್ಟದ ರಾಜತಾಂತ್ರಿಕ ನಿಯೋಗವನ್ನು ಕಳುಹಿಸಲು ನಿರ್ಧರಿಸಿದ್ದಾರೆ’ ಎಂದು ಸರ್ಕಾರಿ ಸ್ವಾಮ್ಯದ ‘ರೇಡಿಯೊ ಪಾಕಿಸ್ತಾನ’ ವರದಿ ಮಾಡಿದೆ.

‘ಪ್ರಧಾನಿಯವರು ಮುಂಜಾನೆ ನನ್ನನ್ನು ಸಂಪರ್ಕಿಸಿದರು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಶಾಂತಿಗಾಗಿ ಪಾಕಿಸ್ತಾನದ ನಿಲುವು ಮಂಡಿಸಲು ನಿಯೋಗದ ನೇತೃತ್ವ ವಹಿಸುವಂತೆ ವಿನಂತಿಸಿದರು. ಈ ಜವಾಬ್ದಾರಿಯನ್ನು ಸ್ವೀಕರಿಸಲು ಮತ್ತು ಈ ಸವಾಲಿನ ಸಮಯದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಬದ್ಧತೆ ತೋರುವುದು ನನಗೆ ಗೌರವದ ವಿಚಾರ’ ಎಂದು ಬಿಲಾವಲ್ ಶನಿವಾರ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.