ಪೀಟ್ ಹೆಗ್ಸೆತ್
ಚಿತ್ರ: ವಿಕಿಪೀಡಿಯಾ
ವಾಷಿಂಗ್ಟನ್: ‘ಇರಾನ್ ವಿರುದ್ಧ ಯುದ್ಧವನ್ನು ನಾವು ಬಯಸುವುದಿಲ್ಲ. ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿ ನಡೆಸಿದ ಬಾಂಬ್ ದಾಳಿಯ ಹಿಂದೆ ಇರಾನ್‌ನಲ್ಲಿ ಆಡಳಿತ ಬದಲಿಸುವ ಉದ್ದೇಶವೂ ಇಲ್ಲ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಭಾನುವಾರ ಹೇಳಿದ್ದಾರೆ.
ಇನ್ನೊಂದೆಡೆ, ‘ಈ ದಾಳಿಯು, ಅಮೆರಿಕದೊಂದಿಗೆ ಮಾತುಕತೆ ನಡೆಸುವುದಕ್ಕೆ ಇರಾನ್‌ಗೆ ಹೊಸದಾಗಿ ಅವಕಾಶ ಕಲ್ಪಿಸಿದೆ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.
ರಕ್ಷಣಾ ಇಲಾಖೆ ಕೇಂದ್ರ ಕಚೇರಿ ಪೆಂಟಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೆಗ್ಸೆತ್ ಹಾಗೂ ವಾಯುಪಡೆಯ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್‌ನ ಮುಖ್ಯಸ್ಥ ಜನರಲ್ ಡ್ಯಾನ್ ಕೇನ್ ಮಾತನಾಡಿ,‘ಪಳಗಿದ ಸಿಬ್ಬಂದಿ ನಡೆಸಿದ ಈ ಕಾರ್ಯಾಚರಣೆಯನ್ನು ಇರಾನ್‌ನ ಯಾವುದೇ ಪ್ರತಿರೋಧವಿಲ್ಲದೆಯೇ ಕಾರ್ಯಗತಗೊಳಿಸಲಾಯಿತು’ ಎಂದರು.
‘ಫೋರ್ಡೊ, ನಟಾನ್ಜ್ ಹಾಗೂ ಇಸ್‌ಫಹಾನ್ ಪರಮಾಣು ಘಟಕಗಳನ್ನು ನಾಶ ಮಾಡುವುದು ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ನ ಉದ್ದೇಶವಾಗಿತ್ತು. ಅದನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ಅಂತಿಮ ಫಲಿತಾಂಶ ತಿಳಿಯಲು ಸಮಯ ಬೇಕು. ಆದರೆ, ಈ ಮೂರು ಘಟಕಗಳಿಗೆ ಭಾರಿ ಹಾನಿಯಾಗಿರುವುದನ್ನು ಆರಂಭಿಕ ಪರಿಶೀಲನೆ ದೃಢಪಡಿಸಿದೆ’ ಎಂದೂ ಅವರು ಹೇಳಿದರು.
ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಉಪಾಧ್ಯಕ್ಷ ವ್ಯಾನ್ಸ್,‘ದಾಳಿ ವೇಳೆ ನಮಗೆ ಏನು ಕಂಡುಬಂತು ಎಂಬುದು ಸೂಕ್ಷ್ಮ ವಿಚಾರ. ಹೀಗಾಗಿ ಅದರ ಬಗ್ಗೆ ನಾನು ಚರ್ಚಿಸುವುದಿಲ್ಲ. ಆದರೆ, ಅಣ್ವಸ್ತ್ರ ಅಭಿವೃದ್ಧಿಪಡಿಸಬೇಕೆನ್ನುವ ಇರಾನ್‌ನ ಯತ್ನವನ್ನು ನಾವು ತಡೆದಿದ್ದೇವೆ ಎಂದು ವಿಶ್ವಾಸದಿಂದ ಹೇಳಬಲ್ಲೆ’ ಎಂದರು.
‘ಈ ಬಿಕ್ಕಟ್ಟಿಗೆ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳುವಂತೆ ಇರಾನ್ ಜೊತೆ ವ್ಯಾಪಕ ಸಮಾಲೋಚನೆ ನಡೆಸಿದೆವು. ಮಾತುಕತೆಗೆ ಇರಾನ್ ಸಿದ್ಧವಿಲ್ಲ ಎಂಬುದು ಮನವರಿಕೆಯಾದ ಬಳಿಕವೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಾಳಿ ನಡೆಸುವ ನಿರ್ಧಾರ ಕೈಗೊಂಡರು’ ಎಂದು ವ್ಯಾನ್ಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.