ನ್ಯೂಯಾರ್ಕ್: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಭಾರತದ ವಿರುದ್ಧ ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಪುನಃ ವಾಗ್ದಾಳಿ ಮಾಡಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ನವರೊ ಅವರು ಇತ್ತೀಚೆಗೆ ಭಾರತದ ವಿರುದ್ಧ ‘ಎಕ್ಸ್’ನಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ಕಿಡಿಕಾರಿದ್ದರು.
ಈ ಆರೋಪಗಳ ಕುರಿತು ಸತ್ಯಾಸತ್ಯತೆ ಪರಿಶೀಲಿಸಿರುವ ‘ಎಕ್ಸ್’, ‘ನವರೊ ಆರೋಪಗಳು ಬೂಟಾಟಿಕೆಯಿಂದ ಕೂಡಿವೆ. ಸಾರ್ವಭೌಮ ದೇಶವಾಗಿರುವ ಭಾರತವು ತನ್ನ ಇಂಧನ ಭದ್ರತೆಗಾಗಿ ಕಾನೂನುಬದ್ಧವಾಗಿಯೇ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಇದು ಯಾವುದೇ ರೀತಿಯ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಆಗುವುದಿಲ್ಲ’ ಎಂದು ಹೇಳಿದೆ.
‘ರಷ್ಯಾದಿಂದ ತೈಲ ಖರೀದಿಸದಂತೆ ಭಾರತದ ಮೇಲೆ ಒತ್ತಡ ಹೇರುತ್ತಿರುವ ಅಮೆರಿಕವು ಶತಕೋಟಿ ಡಾಲರ್‌ಗಳಷ್ಟು ಮೌಲ್ಯದ ಯುರೇನಿಯಂ ಸೇರಿದಂತೆ ಹಲವು ಸರಕುಗಳನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ. ಇದು ಅಮೆರಿಕದ ದ್ವಂದ್ವ ನೀತಿಯನ್ನು ಬಹಿರಂಗಪಡಿಸುತ್ತದೆ’ ಎಂದು ತಿಳಿಸಿದೆ.
‘ಎಕ್ಸ್’ನ ಈ ಪೋಸ್ಟ್‌ಗಳಿಂದ ಕೆಂಡಾಮಂಡಲರಾಗಿರುವ ನವರೊ, ‘ಮಸ್ಕ್ ಅವರು ಜನರ ಪೋಸ್ಟ್‌ಗಳನ್ನು ಪ್ರಚಾರಕ್ಕೆ ಬಳಸುತ್ತಿದ್ದಾರೆ. ಇದು ಕೆಟ್ಟ ಟಿಪ್ಪಣಿಯಾಗಿದೆ. ಭಾರತವು ಲಾಭದ ಉದ್ದೇಶದಿಂದ ಮಾತ್ರ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವ ಮೊದಲು ಭಾರತವು ರಷ್ಯಾದಿಂದ ಯಾವುದೇ ತೈಲ ಖರೀದಿಸುತ್ತಿರಲಿಲ್ಲ’ ಎಂದು ಪುನರುಚ್ಚರಿಸಿದ್ದಾರೆ.
ಮುಂದುವರಿದು, ‘ಭಾರತದ ಸರ್ಕಾರಿ ಯಂತ್ರವು ರಷ್ಯಾದತ್ತ ವಾಲುತ್ತಿದೆ. ಉಕ್ರೇನ್ ಜನರನ್ನು ಕೊಲ್ಲುವುದನ್ನು ತಡೆಯಿರಿ ಮತ್ತು ಅಮೆರಿಕದ ಜನರ ಉದ್ಯೋಗಗಳನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಿ’ ಎಂದು ನವರೊ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
ನವರೊ ಅವರ ಆರೋಪವನ್ನು ಭಾರತ ತಿರಸ್ಕರಿಸಿದೆ. ಅಲ್ಲದೆ ಅದು ತಪ್ಪಾದ ಮತ್ತು ದಾರಿತಪ್ಪಿಸುವ ಆರೋಪ ಎಂದು ಹೇಳಿದೆ.
ರಷ್ಯಾದಿಂದ ತೈಲ ಖರೀದಿಸುವುದು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಾರುಕಟ್ಟೆಯ ಚಲನಶೀಲತೆಯನ್ನು ಅವಲಂಬಿಸಿದೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.