ADVERTISEMENT

ಫಿಲಿಪೀನ್ಸ್‌ ಮಾಜಿ ಅಧ್ಯಕ್ಷ ಬೆನಿಗ್ನೊ ಅಕ್ವಿನೊ ನಿಧನ

ಏಜೆನ್ಸೀಸ್
Published 24 ಜೂನ್ 2021, 6:49 IST
Last Updated 24 ಜೂನ್ 2021, 6:49 IST
ಬೆನಿಗ್ನೊ ಅಕ್ವಿನೊ
ಬೆನಿಗ್ನೊ ಅಕ್ವಿನೊ   

ಮನಿಲಾ: ಫಿಲಿಪೀನ್ಸ್‌ನ ಮಾಜಿ ಅಧ್ಯಕ್ಷ ಹಾಗೂ ಪ್ರಜಾಪ್ರಭುತ್ವವಾದಿ ಹೋರಾಟಗಾರರ ಕುಟುಂಬದ ಕುಡಿಯಾಗಿದ್ದ ಬೆನಿಗ್ನೊ ಅಕ್ವಿನೊ III (61) ಅವರು ಮಂಗಳವಾರ ನಿಧನರಾದರು. ಅವರು 2010 ರಿಂದ 2016ರವರೆಗೆ ಈ ದ್ವೀಪರಾಷ್ಟ್ರದ ಅಧ್ಯಕ್ಷರಾಗಿದ್ದರು.

ಬೆನಿಗ್ನೊ ಅಕ್ವಿನೊ ಅವರ ನಿಧನವನ್ನು ಅವರ ಸೋದರ ಸಂಬಂಧಿ ಮತ್ತು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಕಾರಣವನ್ನು ತಕ್ಷಣಕ್ಕೆ ಬಹಿರಂಗಪಡಿಸಿಲ್ಲ. ಕುಟುಂಬದವರು ಅವರನ್ನು ಬೆಳಿಗ್ಗೆ ಮನಿಲಾದ ಆಸ್ಪತ್ರೆಗೆ ದಾಖಲಿಸಿದ್ದರು.

ಅಕ್ವಿನೊ ಅವರು ಡಯಾಲಿಸಿಸ್‌ ಚಿಕಿತ್ಸೆ ಪಡೆಯುತ್ತಿದ್ದರು. ಬದಲಿ ಮೂತ್ರಪಿಂಡ ಜೋಡಣೆಗೆ ಸಿದ್ಧತೆ ನಡೆದಿತ್ತು ಎಂದು ಅವರ ಸಂಪುಟ ಸಹೋದ್ಯೋಗಿಯಾಗಿದ್ದ ರೊಜೆಲಿಯೊ ಸಿಂಗ್ಸನ್‌ ತಿಳಿಸಿದ್ದಾರೆ. ಅಕ್ವಿನೊ ಅವರು ಅವಿವಾಹಿತರಾಗಿದ್ದರು.

ADVERTISEMENT

ಬೆನಿಗ್ನೊ ಅಕ್ವಿನೊ ಅವರ ತಂದೆ ಸೆನ್‌ ಬೆನಿಗ್ನೊ ಅಕಿನೊ ಜೂನಿಯರ್‌ ಅವರು 1983ರಲ್ಲಿ ಸೇನೆಯ ವಶದಲ್ಲಿದ್ದ ವೇಳೆಯೇ ಮನಿಲಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹತ್ಯೆಯಾಗಿದ್ದರು. ವಿಮಾನ ನಿಲ್ದಾಣ ಈಗ ಅವರ ಹೆಸರನ್ನು ಹೊಂದಿದೆ. ತಾಯಿ ಕೊರಾಝೊನ್‌ ಅಕ್ವಿನೊ ಅವರು ಆಗಿನ ಸರ್ವಾಧಿಕಾರಿ ಫರ್ಡಿನಾಂಡ್‌ ಮಾರ್ಕೊಸ್‌ ವಿರುದ್ಧ ದೇಶದಲ್ಲಿ ನಡೆದ ‘ಜನಶಕ್ತಿ’ ದಂಗೆಯ ನೇತೃತ್ವ ವಹಿಸಿದ್ದರು. ನಂತರ ದೇಶದ ಅಧ್ಯಕ್ಷೆಯೂ ಆಗಿದ್ದರು. ಮಾರ್ಕೋಸ್‌ ಆಡಳಿತದ ವೇಳೆ ಅಕ್ವಿನೊ ಕುಟುಂಬ ಅಮೆರಿಕದಲ್ಲಿ ಆಶ್ರಯ ಪಡೆದಿತ್ತು.

ಅಕ್ವಿನೊ ಕುಟುಂಬದವರೇ ಫಿಲಿಪೀನ್ಸ್‌ನಲ್ಲಿ ಹಲವು ವರ್ಷ ಆಡಳಿತ ನಡೆಸಿದ್ದಾರೆ. ಉತ್ತರ ಫಿಲಿಪೀನ್ಸ್‌ನ ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಅಕ್ವಿನೊ, ಭ್ರಷ್ಟಾಚಾರದ ಆರೋಪಗಳಿಂದ ದೂರವಾಗಿದ್ದರು. ಆದರೆ ಅಧಿಕಾರದ ಕೊನೆಯ ದಿನಗಳಲ್ಲಿ ಆಡಳಿತಗಾರರು ಹಣದ ದುರುಪಯೋಗ ನಡೆಸಿದ್ದರಿಂದ ಅವರಿಗೂ ಕಳಂಕ ತಟ್ಟಿತ್ತು.

ತಾಯಿ ಕೊರಾಝೋನ್‌ ಅಕ್ವಿನೊ ಆಡಳಿತದ ವಿರುದ್ಧ 1986ರಲ್ಲಿ ಸೇನಾ ಕ್ರಾಂತಿಗೆ ಯತ್ನ ನಡೆದಿತ್ತು. ಬೆನಿಗ್ನೊ ಅಕಿನೊ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಅವರಿಗೆ ತೀವ್ರ ಗಾಯಾಳಾಗಿದ್ದವು. ಕುತ್ತಿಗೆಯಲ್ಲೇ ಉಳಿದಿದ್ದ ಗುಂಡುಗಳನ್ನು ಹೊರ ತೆಗೆಯುವುದು ಸಾಧ್ಯವಾಗಲೇ ಇಲ್ಲ. ಅಂದು ಅವರ ಮೂವರು ಅಂಗರಕ್ಷಕರು ಮೃತಪಟ್ಟಿದ್ದರು.

ಅಕಿನೊ ಚೀನಾದ ಜೊತೆ ಉತ್ತಮ ಸಂಬಂಧ ಹೊಂದಿರಲಿಲ್ಲ. ದಕ್ಷಿಣ ಚೀನಾ ಸಮುದ್ರದ ಆಯಕಟ್ಟಿನ ಪ್ರದೇಶದ ಮೇಲೆ ಚೀನಾ 2012ರಲ್ಲಿ ಅತಿಕ್ರಮಣ ನಡೆಸಿದಾಗ ಅದರ ವಿರುದ್ಧ ಧ್ವನಿಯೆತ್ತಿದ್ದರು. ಅಧಿಕಾರದ ಐದನೇ ವರ್ಷ, ಮಲೇಷಿಯಾದ ಉಗ್ರನೊಬ್ಬನನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ 44 ಮಂದಿ ಕಮಾಂಡೊಗಳು ಮೃತಪ್ಟಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.