ADVERTISEMENT

ಜಿ–20 ಶೃಂಗಸಭೆ: ಜಾಗತಿಕ ಸವಾಲುಗಳ ಚರ್ಚೆಗೆ ವೇದಿಕೆ

ಬಾಲಿ ತಲುಪಿದ ಪ್ರಧಾನಿ ಮೋದಿ: ವಿಶ್ವ ನಾಯಕರು ಭಾಗಿ

ಪಿಟಿಐ
Published 14 ನವೆಂಬರ್ 2022, 16:17 IST
Last Updated 14 ನವೆಂಬರ್ 2022, 16:17 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವರ್ಣರಂಜಿತ ಸ್ವಾಗತ ಕೋರಲಾಯಿತು–ಪಿಟಿಐ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವರ್ಣರಂಜಿತ ಸ್ವಾಗತ ಕೋರಲಾಯಿತು–ಪಿಟಿಐ   

ಬಾಲಿ (ಪಿಟಿಐ): ಜಿ–20 ಗುಂಪಿನ ಶೃಂಗಸಭೆಗೆ ಮಂಗಳವಾರ ಇಲ್ಲಿ ಚಾಲನೆ ಸಿಗಲಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿದಂತೆ ವಿಶ್ವ ನಾಯಕರ ಸಮಾಗಮಕ್ಕೆ ಇದು ಸಾಕ್ಷಿಯಾಗಲಿದೆ.

ಜಾಗತಿಕ ಬೆಳವಣಿಗೆ, ಆಹಾರ ಮತ್ತು ಇಂಧನ ಭದ್ರತೆ, ಪರಿಸರ, ಆರೋಗ್ಯ ಮತ್ತು ಡಿಜಿಟಲ್‌ ರೂಪಾಂತರ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತ ಚರ್ಚೆಗೂ ಸಭೆ ವೇದಿಕೆ ಕಲ್ಪಿಸಲಿದೆ.

ಸಭೆಯಲ್ಲಿ ಭಾಗವಹಿಸುತ್ತಿರುವ ಜಾಗತಿಕ ನಾಯಕರು,ಉಕ್ರೇನ್‌ನಲ್ಲಿ ಬೆಳೆಯುವ ಗೋಧಿಯನ್ನುಕಪ‍್ಪು ಸಮುದ್ರ ಮಾರ್ಗವಾಗಿ ರಫ್ತು ಮಾಡುವ ಕುರಿತ ಒಪ್ಪಂದ ನವೀಕರಿಸುವಂತೆ ರಷ್ಯಾ ಮೇಲೆ ಒತ್ತಡ ಹೇರುವ ಸಾಧ್ಯತೆ ಹೆಚ್ಚಿದೆ. ರಷ್ಯಾವು ಉಕ್ರೇನ್‌ ಮೇಲೆ ಯುದ್ಧ ಸಾರಿರುವುದರಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ADVERTISEMENT

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಸಭೆಯಿಂದ ದೂರ ಉಳಿದಿದ್ದಾರೆ. ಅವರ ಬದಲು ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್‌ ಸಭೆಗೆ ಹಾಜರಾಗಲಿದ್ದಾರೆ.

ಪ್ರಧಾನಿ ಮೋದಿ ಅವರು ಸೋಮವಾರ ಬಾಲಿ ತಲುಪಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಮತ್ತು ವರ್ಣರಂಜಿತ ಸ್ವಾಗತ ಸ್ವೀಕರಿಸಿರುವ ಅವರು ಜಾಗತಿಕ ಸಮಸ್ಯೆಗಳ ಕುರಿತು ವಿಶ್ವ ನಾಯಕರೊಂದಿಗೆ ಚರ್ಚಿಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

‘ಸಭೆಯ ವೇಳೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಗಟ್ಟಿಗೊಳಿಸಲು ಮುಂದಾಗುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಮೋದಿ ಅವರು ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್‌ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆಯೇ ಇಲ್ಲವೆ ಎಂಬುದು ಇನ್ನೂ ಖಾತರಿಯಾಗಿಲ್ಲ. ಒಂದೊಮ್ಮೆ ಉಭಯ ನಾಯಕರ ನಡುವೆ ಸಭೆ ನಡೆದರೆ ಅದು 2020ರ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ನಡೆಯುವ ಮೊದಲ ಸಭೆ ಆಗಿರಲಿದೆ.

ಭಾರತವು ಡಿಸೆಂಬರ್‌ 1ರಂದು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಈ ಕುರಿತು ಮಾತನಾಡಿರುವ ಮೋದಿ, ‘ಮುಂದಿನ ಸಭೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ನಾಯಕರನ್ನೂ ವೈಯಕ್ತಿಕವಾಗಿ ಆಹ್ವಾನಿಸುತ್ತೇನೆ’ ಎಂದಿದ್ದಾರೆ.

ಮಂಗಳವಾರ ಸಂಜೆ ಮೋದಿ ಅವರು ಇಂಡೊನೇಷ್ಯಾದಲ್ಲಿರುವ ಭಾರತೀಯ ಸಮುದಾಯದವರನ್ನು ಭೇಟಿಯಾಗಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

ಮುಖ್ಯಾಂಶಗಳು

*ಎರಡು ದಿನ ನಡೆಯಲಿರುವ ಸಭೆ

*ಡಿ.1ರಂದು ಜಿ–20 ಗುಂಪಿನ ಅಧ್ಯಕ್ಷತೆ ವಹಿಸಲಿರುವ ಭಾರತ

*ಸಭೆಯಿಂದ ದೂರ ಉಳಿದಿರುವ ರಷ್ಯಾ ಅಧ್ಯಕ್ಷ ಪುಟಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.