ಜೋಹಾನೆಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ತಂತ್ರಜ್ಞಾನ ಉದ್ಯಮಿಗಳು ಮತ್ತು ಭಾರತೀಯ ಸಮುದಾಯದ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂವಾದ ನಡೆಸಿದರು. ಭಾರತದೊಂದಿಗೆ ತಮ್ಮ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸುವಂತೆ ಕರೆ ನೀಡಿದರು.
ಜಿ 20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಜೋಹಾನೆಸ್‌ಬರ್ಗ್‌ನಲ್ಲಿರುವ ಮೋದಿ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಭಾರತೀಯ ಮೂಲದ ತಂತ್ರಜ್ಞಾನ ಉದ್ಯಮಿಗಳೊಂದಿಗೆ ಫಲಪ್ರದ ಸಂವಾದ ನಡೆಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಫಿನ್‌ಟೆಕ್, ಸಾಮಾಜಿಕ ಮಾಧ್ಯಮ ವೇದಿಕೆಗಳು, ಕೃಷಿ, ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಾಧನಗಳು ಮತ್ತು ಇತರ ಕ್ಷೇತ್ರಗಳಲ್ಲಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಉದ್ಯಮಿಗಳು ವಿವರಿಸಿದ್ದಾರೆ ಎಂದು ಹೇಳಿದ್ದಾರೆ.
ವಿವಿಧ ಸಮುದಾಯ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರನ್ನು ಸಹ ಪ್ರಧಾನಿ ಭೇಟಿಯಾದರು.
'ಅನಿವಾಸಿ ಭಾರತೀಯರು ವಿವಿಧ ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಬಹಳವಾಗಿ ಮೆಚ್ಚಿಕೊಂಡರು. ಯೋಗ, ಆಯುರ್ವೇದದಂತಹ ಅಭ್ಯಾಸಗಳು ಸೇರಿದಂತೆ ಭಾರತೀಯ ಸಂಸ್ಕೃತಿಯ ಜನಪ್ರಿಯತೆಯನ್ನು ದಕ್ಷಿಣ ಆಫ್ರಿಕಾದ ಜನರಲ್ಲಿ ಹೆಚ್ಚಿಸಲು ಅವರಲ್ಲಿ ಮನವಿ ಮಾಡಿದೆ’ಎಂದು ಮೋದಿ ಹೇಳಿದ್ದಾರೆ.
‘ಎರಡೂ ದೇಶಗಳ ನಡುವಿನ 'ಜೀವಂತ ಸೇತುವೆ'ಯಾಗಿ ಅನಿವಾಸಿ ಭಾರತೀಯರ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸ್ನೇಹದ ಐತಿಹಾಸಿಕ ಬಂಧಗಳನ್ನು ಪೋಷಿಸುವಲ್ಲಿ ದಕ್ಷಿಣ ಆಫ್ರಿಕಾದಲ್ಲಿ 1.7 ಮಿಲಿಯನ್‌ಗಿಂತಲೂ ಹೆಚ್ಚು ಬಲಿಷ್ಠ ಭಾರತೀಯ ವಲಸಿಗಾರರ ಕೊಡುಗೆ ಮಹತ್ವದ್ದಾಗಿದೆ ಎಂದು ಮೋದಿ ಶ್ಲಾಘಿಸಿದರು’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.