ವಿಯನ್‌ಟಿಯಾನ್: ಲಾವೊಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ, ಉಭಯ ದೇಶಗಳ ನಡುವಣ ಪಾರಂಪರಿಕ ಮತ್ತು ನಾಗರಿಕ ಬಾಂಧವ್ಯದ ಪ್ರತೀಕ ಎನ್ನಲಾದ ‘ರಾಮಾಯಣ’ದ ಲಾವೊಂಟಿಯಾನ್ ಆವೃತ್ತಿಯನ್ನು ವೀಕ್ಷಿಸಿದರು.
ಲಾವೊಸ್‌ನ ರಾಜಧಾನಿಯಲ್ಲಿ ನಡೆಯಲಿರುವ ಅಸಿಯಾನ್–ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಲ್ಲಿಗೆ ಆಗಮಿಸಿದ್ದಾರೆ.
ಫಲಕ್ ಫಲಂ ಎಂದು ಹೆಸರಿಸಲಾದ ‘ಲಾವೊ ರಾಮಾಯಣ’ ಭಾಗದ ಪ್ರದರ್ಶನವನ್ನು ಅವರು ವೀಕ್ಷಿಸಿದರು. ಲುಅಂಗ್ ಪ್ರಬಂಗ್‌ನ ಹೆಸರಾಂತ ರಾಯಲ್ ರಂಗತಂಡವು ಈ ಸಂಚಿಕೆಯನ್ನು ಪ್ರಸ್ತುತಪಡಿಸಿತು.
ಸಂಸ್ಥೆಯ ವೆಬ್‌ಸೈಟ್‌ನ ಮಾಹಿತಿ ಅನುಸಾರ, ಲಾವೊ ರಾಮಾಯಣ ಆವೃತ್ತಿಯು ಭಾರತದ ಮೂಲ ಆವೃತ್ತಿಗಿಂತಲೂ ಭಿನ್ನವಾಗಿದೆ. ಬೌದ್ಧ ಮಿಷನರಿಗಳು 16ನೇ ಶತಮಾನದಲ್ಲಿ ಇಲ್ಲಿ ಪರಿಚಯಿಸಿದರು.
ಈ ಕುರಿತು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಪ್ರದರ್ಶನವು ಉಭಯ ದೇಶಗಳ ನಡುವಿನ ಪಾರಂಪರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಿಂಬಿಸಿತು ಎಂದಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿಯವರು ಲವೊ ಪಿಡಿಆರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಲ್ಲಿ ಹಲವು ಹಿರಿಯ ಬೌದ್ಧ ಭಿಕ್ಕುಗಳು ಪ್ರಧಾನಿಯವರಿಗೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ಹಲವು ಪ್ರಮುಖರು ಭಾಗವಹಿಸಿದ್ದರು.
‘ಸಾಂಸ್ಕೃತಿಕ ಬಾಂಧವ್ಯದ ಕೊಂಡಿ ಬೇರೂರಿದೆ. ಪಾರಂಪರಿಕವಾದ ಹಲವು ತಾಣಗಳನ್ನು ಸಂರಕ್ಷಿಸಲು ಲಾವೊ ಪಿಡಿಆರ್ ಜೊತೆಗೂಡಿ ಕಾರ್ಯನಿರ್ವಹಿಸಲು ಭಾರತಕ್ಕೆ ಹೆಮ್ಮೆಎನಿಸಲಿದೆ‘ ಎಂದು ಮೋದಿ ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.