ADVERTISEMENT

ಭಯೋತ್ಪಾದನೆ ಉಗಮ ಸ್ಥಾನ ಪಾಕ್‌: ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ಟೀಕೆ

ಸಿಂಗಪುರದಲ್ಲಿ ಪ್ರಧಾನಿ

ಪಿಟಿಐ
Published 14 ನವೆಂಬರ್ 2018, 20:15 IST
Last Updated 14 ನವೆಂಬರ್ 2018, 20:15 IST
ಸಿಂಗಪುರದಲ್ಲಿ ಬುಧವಾರ ಪೂರ್ವ ಏಷ್ಯಾ ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಮಾತುಕತೆ ನಡೆಸಿದರು
ಸಿಂಗಪುರದಲ್ಲಿ ಬುಧವಾರ ಪೂರ್ವ ಏಷ್ಯಾ ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಮಾತುಕತೆ ನಡೆಸಿದರು   

ಸಿಂಗಪುರ: ‘ಜಾಗತಿಕ ಮಟ್ಟದಲ್ಲಿ ಕಂಡು ಬರುವ ಭಯೋತ್ಪಾದನೆಯ ಮೂಲವನ್ನು ಹುಡುಕುತ್ತಾ ಹೋದರೆ, ಎಲ್ಲ ಮಾರ್ಗಗಳು ಒಂದೇ ಉಗಮ ಸ್ಥಾನ ಹಾಗೂ ಒಂದೇ ದೇಶವನ್ನು ತಲುಪುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪೂರ್ವ ಏಷ್ಯಾ ಶೃಂಗಸಭೆಗೂ ಮುನ್ನ ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರೊಂದಿಗೆ ಬುಧವಾರ ಮಾತನಾಡಿದ ಅವರು, ಪರೋಕ್ಷವಾಗಿ ಪಾಕಿಸ್ತಾನ ಕುರಿತು ಈ ಪ್ರಸ್ತಾಪ ಮಾಡಿದರು.

‘ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಯೋತ್ಪಾದಕರು ಸಹ ಪಾಲ್ಗೊಂಡಿದ್ದರು. ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಸೂತ್ರಧಾರ ಹಫೀಜ್‌ ಸಯೀದ್‌ ಸ್ಥಾಪಿಸಿರುವ ಪಕ್ಷವೂ ಚುನಾವಣೆಯಲ್ಲಿ ಸ್ಪರ್ಧಿಸಿತ್ತು’ ಎಂದು ಮೋದಿ ವಿವರಿಸಿದರು.

ADVERTISEMENT

ಉಭಯ ನಾಯಕರ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ, ‘ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಭಯೋತ್ಪಾದನೆ ಹಾಗೂ ಅದರ ನಿರ್ಮೂಲನೆ ಕುರಿತು ಸಹ ಚರ್ಚೆ ನಡೆಯಿತು’ ಎಂದರು.

‘ಪಾಕಿಸ್ತಾನದ ಚುನಾವಣೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಸ್ಪರ್ಧಿಸಿರುವುದು ಗಂಭೀರ ಮತ್ತು ಕಳವಳಕಾರಿ ವಿಷಯ. ಇದು ಕೇವಲ ಭಾರತ ಮತ್ತು ಅಮೆರಿಕಕ್ಕೆ ಸಂಬಂಧಿಸಿದ್ದಲ್ಲ, ಇಡೀ ವಿಶ್ವವೇ ಈ ಬಗ್ಗೆ ಗಮನ ಹರಿಸಬೇಕಿದೆ ಎಂಬುದಾಗಿ ಪ್ರಧಾನಿ ಹೇಳಿದರು’ ಎಂದೂ ಅವರು ವಿವರಿಸಿದರು.

‘ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಪ್ರಸ್ತಾಪಿಸಿದ ಪೆನ್ಸ್, ಈ ಕೃತ್ಯಕ್ಕೆ ನ. 26ರಂದು ಹತ್ತು ವರ್ಷ ತುಂಬಲಿದೆ. ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ ಉತ್ತಮ ಸಹಕಾರ ಇರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು’ ಎಂದೂ ತಿಳಿಸಿದರು.

‘ಇಂಡಿಯಾ–ಆನಾ’

ಪ್ರಧಾನಿ ಮೋದಿ ಹಾಗೂ ಮೈಕ್‌ ಪೆನ್ಸ್‌ ನಡುವಿನ ಮಾತುಕತೆ ಲಘುಹಾಸ್ಯಕ್ಕೂ ಸಾಕ್ಷಿಯಾಯಿತು.

ಪೆನ್ಸ್‌ ಅವರ ತವರು ರಾಜ್ಯದ ಹೆಸರು ಇಂಡಿಯಾನ. ಮಾತನಾಡುವ ಸಂದರ್ಭದಲ್ಲಿ ಮೋದಿ ಅವರು ಇಂಡಿಯಾನ ಎಂಬುದನ್ನು ‘ಇಂಡಿಯಾ–ಆನಾ’ (ಭಾರತಕ್ಕೆ ಬನ್ನಿ) ಎಂದು ಚಮತ್ಕಾರಿಕವಾಗಿ ಹೇಳುವ ಮೂಲಕ ಆಹ್ವಾನ ನೀಡಿದರು.

ಮುಗುಳ್ನಗುತ್ತಲೇ ಈ ಆಹ್ವಾನ ಸ್ವೀಕರಿಸಿದ ಪೆನ್ಸ್‌, ‘ಇಂಡಿಯಾಕ್ಕೆ ಬರಲು ನಾನು ಕಾತರನಾಗಿದ್ದೇನೆ. ನಾನು ಇಂಡಿಯಾ–ಆನಾ ಆಗುತ್ತೇನೆ’ ಎಂದರು. ಕಾರಣ ಇಷ್ಟೇ, 2017ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಮೋದಿ, ಪೆನ್ಸ್‌ ಅವರೊಂದಿಗೆ ಮಾತುಕತೆ ಸಂದರ್ಭದಲ್ಲಿ ಇಂಡಿಯಾನವನ್ನು ‘ಇಂಡಿಯಾ ಆನಾ’, ಅಂದರೆ, ‘ಭಾರತಕ್ಕೆ ಬನ್ನಿ’ ಎಂದರ್ಥ ಎಂದಿದ್ದರು. ಮುಂದಿನ ವರ್ಷ ಪೆನ್ಸ್‌ ಭಾರತಕ್ಕೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.