ADVERTISEMENT

ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸಮಾವೇಶ: ಸೂರ್ಯಪ್ರಕಾಶ್- ಜೋಸ್ ಜಟಾಪಟಿ

ಪಿಟಿಐ
Published 13 ಜುಲೈ 2019, 20:00 IST
Last Updated 13 ಜುಲೈ 2019, 20:00 IST
ವಿನೋದ್ ಕೆ ಜೋಸ್ ಹಾಗೂ ಎ.ಸೂರ್ಯಪ್ರಕಾಶ್
ವಿನೋದ್ ಕೆ ಜೋಸ್ ಹಾಗೂ ಎ.ಸೂರ್ಯಪ್ರಕಾಶ್   

ಲಂಡನ್: ‌ಜಾಗತಿಕ ಸಮಾವೇಶವೊಂದರಲ್ಲಿ ‘ದಿ ಕ್ಯಾರವಾನ್’ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಕೆ. ಜೋಸ್ ಅವರು ಮಾಡಿದ ಭಾಷಣ ‘ಸುಳ್ಳು’ ಮತ್ತು ‘ನಿಖರವಲ್ಲದ’ ಹೇಳಿಕೆಗಳಿಂದ ಕೂಡಿತ್ತು ಎಂದು ಪ್ರಸಾರ ಭಾರತಿ ಮುಖ್ಯಸ್ಥ ಡಾ. ಎ. ಸೂರ್ಯಪ್ರಕಾಶ್ ಅವರು ಟೀಕಿಸಿದ್ದಾರೆ.

ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ‘ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸಮಾವೇಶ’ದ ‘ಧರ್ಮ ಮತ್ತು ಮಾಧ್ಯಮ’ ಗೋಷ್ಠಿಯಲ್ಲಿ ಜೋಸ್ ಅವರು ಮಾತನಾಡಿದ್ದರು. ಆದರೆ ಅವರ ಭಾಷಣ ‘ಭಾರತ ವಿರೋಧಿ’ ಎಂದು ಸೂರ್ಯಪ್ರಕಾಶ್ ಹೇಳಿದ್ದಾರೆ.

ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದನ್ನು ತೋರಿಸಲು ಜೋಸ್ ಅವರು ಈ ವೇದಿಕೆ ಬಳಸಿಕೊಂಡರು. ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಅವರು, ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವಿಡಿಯೊಗಳನ್ನು ಬಳಸಿಕೊಂಡರು.

ADVERTISEMENT

‘ಭಾರತದಲ್ಲಿ ನೂರಾರು ಕ್ರೈಸ್ತರನ್ನು ಹತ್ಯೆ ಮಾಡಲಾಗಿದೆ. 1984ರಲ್ಲಿ ಸಿಖ್ಖರ ವಿರುದ್ಧ ಆರ್‌ಎಸ್‌ಎಸ್‌ ದಂಗೆ ಆಯೋಜಿಸಿತ್ತು’ ಎಂದು ಜೋಸ್ ಹೇಳಿದ್ದರು.

ಇದಾದ ಬಳಿಕ ಮುಕ್ತ ಚರ್ಚೆ ಆರಂಭವಾದಾಗ ಪ್ರತಿಕ್ರಿಯೆ ನೀಡಿದ ಸೂರ್ಯಪ್ರಕಾಶ್ ಅವರು ‘ಜೋಸ್ ಅವರ ಹಲವು ಹೇಳಿಕೆಗಳು ಸುಳ್ಳು. ಪ್ರೇಕ್ಷಕರು ಅವುಗಳನ್ನು ನಂಬಿದರೆ, ವಿಶ್ವದಾದ್ಯಂತ ಪ್ರಜಾಪ್ರಭುತ್ವದಲ್ಲಿ ಗೊಂದಲ ಉಂಟಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪಿನಿಂದ ಕೆಲವು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ತಮ್ಮ ಸಿದ್ಧಾಂತಗಳನ್ನು ತಿಳಿಸಲು ಅವರು ಇಂತಹ ವೇದಿಕೆಗಳನ್ನು ಬಳಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಜವಾಬ್ದಾರಿ ಹೊಂದಿರುವ ಮಾಧ್ಯಮಗಳು ಸಾಮಾಜಿಕ ಬಿಕ್ಕಟ್ಟು ಹಾಗೂ ಅಲ್ಪಸಂ‌ಖ್ಯಾತರ ಮೇಲಿನ ದಾಳಿಗಳನ್ನು ವರದಿ ಮಾಡಿವೆ. ದುರಂತ ಎಂದರೆ, ಇವುಗಳನ್ನು ಬಳಸಿಕೊಂಡು ಅವರು ಮಾಧ್ಯಮದ ಘನತೆಯನ್ನೇ ಹಾಳುಮಾಡಿದ್ದಾರೆ’ ಎಂದು ತಿಳಿಸಿದ್ದಾರೆ. ಬ್ರಿಟನ್–ಕೆನಡಾ ಸರ್ಕಾರ ಜಂಟಿಯಾಗಿ ಈ ಸಮಾವೇಶ ಆಯೋಜಿಸಿದ್ದವು.

‘ವೈವಿಧ್ಯತೆ ಸಮಾಜಕ್ಕೆ ಸೀಮಿತವಲ್ಲ’: ‘ಭಾರತದ ವೈವಿಧ್ಯತೆ ಕೇವಲ ಸಾಮಾಜಿಕ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ಥಳೀಯ ಹಾಗೂ ರಾಜ್ಯಗಳ ಮಟ್ಟದಲ್ಲಿ 20ಕ್ಕೂ ಹೆಚ್ಚು ವಿವಿಧ ಪಕ್ಷಗಳು ಆಡಳಿತ ನಡೆಸುತ್ತವೆ. ಆದ್ದರಿಂದ ಕೇವಲ ಒಂದು ಪಕ್ಷ ದೇಶವನ್ನು ಮುನ್ನಡೆಸುತ್ತದೆ ಎನ್ನುವುದು ಸರಿಯಲ್ಲ. ಈ ಮಟ್ಟದಲ್ಲಿ ಭಾರತ ವಿರೋಧಿಯಾದ ಭಾಷಣ ಮಾಡಲು ಆಯೋಜಕರು ವೇದಿಕೆ ಒದಗಿಸಿದ್ದಕ್ಕಾಗಿ ನನಗೆ ನೋವಾಗುತ್ತಿದೆ’ ಎಂದು ಸೂರ್ಯಪ್ರಕಾಶ್ ತಿಳಿಸಿದ್ದಾರೆ.

‘ವೈವಿಧ್ಯತೆ ಸಮಾಜಕ್ಕೆ ಸೀಮಿತವಲ್ಲ’
‘ಭಾರತದ ವೈವಿಧ್ಯತೆ ಕೇವಲ ಸಾಮಾಜಿಕ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸ್ಥಳೀಯ ಹಾಗೂ ರಾಜ್ಯಗಳ ಮಟ್ಟದಲ್ಲಿ 20ಕ್ಕೂ ಹೆಚ್ಚು ವಿವಿಧ ಪಕ್ಷಗಳು ಆಡಳಿತ ನಡೆಸುತ್ತವೆ. ಆದ್ದರಿಂದ ಕೇವಲ ಒಂದು ಪಕ್ಷ ದೇಶವನ್ನು ಮುನ್ನಡೆಸುತ್ತದೆ ಎನ್ನುವುದು ಸರಿಯಲ್ಲ. ಈ ಮಟ್ಟದಲ್ಲಿ ಭಾರತ ವಿರೋಧಿಯಾದ ಭಾಷಣ ಮಾಡಲು ಆಯೋಜಕರು ವೇದಿಕೆ ಒದಗಿಸಿದ್ದಕ್ಕಾಗಿ ನನಗೆ ನೋವಾಗುತ್ತಿದೆ’ ಎಂದು ಸೂರ್ಯಪ್ರಕಾಶ್ ತಿಳಿಸಿದ್ದಾರೆ.

‘ಅಮೆರಿಕದ ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಸಮಯದ ಹಿಂದೆ ಜನಾಂಗೀಯ ಗಲಭೆಗಳಾಗಿದ್ದವು. ಆದರೆ ಅದನ್ನು ಆಧಾರವಾಗಿಟ್ಟುಕೊಂಡು ಅಮೆರಿಕ ಪ್ರಜಾಪ್ರಭುತ್ವ ಹಾಗೂ ಜನಾಂಗೀಯ ವಿರೋಧಿ ದೇಶ ಎಂದು ಹಣೆಪಟ್ಟಿ ಕಟ್ಟಲಾಗುವುದಿಲ್ಲ’ ಎಂದು ಅವರು ಉದಾಹರಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.