ನ್ಯೂಯಾರ್ಕ್/ವಾಷಿಂಗ್ಟನ್: ‘ಕಾಶ್ಮೀರ ಸಮಸ್ಯೆಗೆ ಸಾವಿರ ವರ್ಷಗಳ ಬಳಿಕ ಪರಿಹಾರ ದೊರೆಯಬಹುದೇ ಎಂಬುದನ್ನು ನೋಡಲು ನಿಮ್ಮಿಬ್ಬರ ಜತೆಗೆ ನಾನು ಕೆಲಸ ಮಾಡುತ್ತೇನೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೇನಾ ಸಂಘರ್ಷ ಶಮನಗೊಳಿಸಿ ‘ಕದನ ವಿರಾಮ’ಕ್ಕೆ ತಲುಪಿದ್ದಕ್ಕಾಗಿ ಭಾರತ ಮತ್ತು ಪಾಕಿಸ್ತಾನವನ್ನು ಶ್ಲಾಘಿಸುತ್ತೇನೆ ಎಂದಿರುವ ಅವರು, ಉಭಯ ದೇಶಗಳ ನಾಯಕರನ್ನು ದೇವರು ಆಶೀರ್ವದಿಸಲಿ ಎಂದು ‘ಟ್ರೂತ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ವ್ಯಾಪಾರ ಹೆಚ್ಚಿಸುವೆ:
‘ಈ ಎರಡೂ ಪ್ರಮುಖ ದೇಶಗಳ ಜತೆಗೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ’ ಎಂದೂ ಅವರು ಹೇಳಿದ್ದಾರೆ.
‘ಹಲವರ ಸಾವು, ನೋವು ಮತ್ತು ವಿನಾಶಕ್ಕೆ ಕಾರಣ ಆಗಬಹುದಾದ ಸೇನಾ ಸಂಘರ್ಷವನ್ನು ನಿಲ್ಲಿಸುವ ಅಗತ್ಯವನ್ನು ಅರಿತುಕೊಂಡ ಎರಡೂ ದೇಶಗಳ ಬಲಿಷ್ಠ ನಾಯಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ’ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಕಾರ್ಯಕ್ಕೆ ಮೆಚ್ಚುಗೆ:
ಭಾರತ– ಪಾಕ್ ಮಧ್ಯೆ ಸೇನಾ ಸಂಘರ್ಷ ಶಮಕ್ಕೆ ಟ್ರಂಪ್ ನಡೆಸಿದ ಯತ್ನವನ್ನು ಹಲವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
‘ದೀರ್ಘ ಕಾಲದಿಂದ ಅಸ್ಥಿರವಾಗಿದ್ದ ಪ್ರದೇಶ ಈಗ ಸ್ಥಿರತೆಯತ್ತ ಸಾಗಿದೆ. ಇದು ಅಷ್ಟು ಸುಲಭದ ಕೆಲಸವಲ್ಲ. ಈ ಮೂಲಕ ಟ್ರಂಪ್ ಅವರು ಶಾಂತಿಯತ್ತ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ’ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯು ಟ್ರಂಪ್ ಅವರನ್ನು ಶಾಂತಿಯ ಅಧ್ಯಕ್ಷ ಎಂದು ಕರೆದಿದೆ.
‘ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ತಿಳಿಗೊಳಿಸಲು ಯತ್ನಿಸಿದ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು’ ಎಂದು ಬಲಪಂಥೀಯ ರಾಜಕೀಯ ಕಾರ್ಯಕರ್ತರಾದ ಲಾರಾ ಲೂಮರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.