ADVERTISEMENT

ಅಲ್ಪಸಂಖ್ಯಾತರ ವಿರುದ್ಧ ಕ್ರಮ: ಷಿಕಾಗೊದಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಪ್ರತಿಭಟನೆ

ಭಾರತ ಸರ್ಕಾರದ ವಿರುದ್ಧ ಆಕ್ರೋಶ

ಪಿಟಿಐ
Published 8 ಸೆಪ್ಟೆಂಬರ್ 2018, 11:49 IST
Last Updated 8 ಸೆಪ್ಟೆಂಬರ್ 2018, 11:49 IST
ವಿಶ್ವ ಹಿಂದೂ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (ಎಡ ಚಿತ್ರ) ಮತ್ತು ಅನುಪಮ್ ಖೇರ್
ವಿಶ್ವ ಹಿಂದೂ ಸಮಾವೇಶದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ (ಎಡ ಚಿತ್ರ) ಮತ್ತು ಅನುಪಮ್ ಖೇರ್    

ಷಿಕಾಗೊ: ಭಾರತ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿ, ಪ್ರತಿಭಟನಾಕಾರರು ಇಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಸಮಾವೇಶದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರ ಪೈಕಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು. ಅನುಚಿತ ವರ್ತನೆ ಮತ್ತು ಸಮಾವೇಶ ಸ್ಥಳಕ್ಕೆ ಅಕ್ರಮ ಪ್ರವೇಶ ಆರೋಪದಡಿ ಮಹಿಳೆಯರನ್ನು ವಶಕ್ಕೆ ಪಡೆದು, ರಾತ್ರಿ ಬಿಡುಗಡೆ ಮಾಡಲಾಗಿದೆ.

‘ವಿಶ್ವದ ಹಿಂದೂ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಭಾರತ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಈ ನಾಯಕರು ಖಂಡಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹಾಗೂ ಇತರೆ ಆರು ಹಿಂದೂ ನಾಯಕರು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ‘ಹಿಂದೂ ಪುನರುಜ್ಜೀವನಕ್ಕಾಗಿ ಸಾಮೂಹಿಕ ಹೊಣೆಗಾರಿಕೆ’ ಕುರಿತು ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎದುರು ಸಾಲಿನಲ್ಲಿ ಕುಳಿತಿದ್ದ ಕೆಲವು ಪ್ರತಿಭಟನಾಕಾರರು ಎದ್ದು ನಿಂತು, ‘ಹಿಂದೂ ಸರ್ವಾಧಿಕಾರತ್ವವನ್ನು ನಿಲ್ಲಿಸಿ’, ‘ಆರ್‌ಎಸ್‌ಎಸ್‌ನವರೇ ಹಿಂದಿರುಗಿ ಹೋಗಿ, ನೀವು ನಗರದಲ್ಲಿರುವುದು ನಮಗಿಷ್ಟವಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು. ಕೆಲವರು ಇದಕ್ಕೆ ಪರ್ಯಾಯವಾಗಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಭಾನುವಾರ ಸಮಾವೇಶದಲ್ಲಿ ಮಾತನಾಡಲಿದ್ದಾರೆ.

ಸಮಾವೇಶ ಮುಗಿಯುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.