ಕರಾಚಿ/ ಮುಂಬೈ: ‘ಆಪರೇಷನ್ ಸಿಂಧೂರ’ವು ಪಾಕಿಸ್ತಾನದ ಪ್ರಮುಖ ಷೇರುಪೇಟೆಯಾದ ಕರಾಚಿ ಸ್ಟಾಕ್ ಎಕ್ಸ್‌ಚೇಂಚ್–100 ಸೂಚ್ಯಂಕದ ಮೇಲೂ ಪರಿಣಾಮ ಬೀರಿದೆ. ಬುಧವಾರದ ವಹಿವಾಟಿನಲ್ಲಿ 6,500 ಅಂಶ ಕುಸಿದಿದೆ.
ಭಾರತವು ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯಿಂದ ಉಭಯ ದೇಶಗಳ ನಡುವೆ ಬಿಕ್ಕಟ್ಟು ತಲೆದೋರಿದೆ. ಇದು ಷೇರುಪೇಟೆಯ ಕುಸಿತಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಷೇರುಪೇಟೆಯು ಒಟ್ಟಾರೆ ಶೇ 5.78ರಷ್ಟು ಕುಸಿದಿದ್ದು, 1,07,007 ಅಂಶಗಳಲ್ಲಿ ಸ್ಥಿರಗೊಂಡಿದೆ.
ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದ ಪ್ರತಿ ಸುಂಕ ನೀತಿಯ ವೇಳೆ ಒಂದೇ ದಿನ 8,700 ಅಂಶ ಪತನ ಕಂಡಿತ್ತು. ಈ ವೇಳೆ ಮಾರುಕಟ್ಟೆ ವಹಿವಾಟನ್ನು ಕೆಲಹೊತ್ತು ಸ್ಥಗಿತಗೊಳಿಸಲಾಗಿತ್ತು. ಎರಡನೇ ಅತಿದೊಡ್ಡ ಪತನ ಇದಾಗಿದೆ.
ಷೇರು ಸೂಚ್ಯಂಕ ಏರಿಕೆ: ಭಾರತದ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 105 ಅಂಶ ಏರಿಕೆ ಕಂಡು 80,746 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 692 ಅಂಶ ಕುಸಿತ ಕಂಡಿತ್ತು. ಬಳಿಕ ಚೇತರಿಕೆ ಕಂಡಿತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 34 ಅಂಶ ಹೆಚ್ಚಳವಾಗಿದ್ದು, 24,414 ಅಂಶಗಳಲ್ಲಿ ಸ್ಥಿರಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.