ADVERTISEMENT

ಒಪೆಕ್‌ನಿಂದ ಹೊರಬರಲು ಕತಾರ್ ನಿರ್ಧಾರ

ಏಜೆನ್ಸೀಸ್
Published 3 ಡಿಸೆಂಬರ್ 2018, 16:58 IST
Last Updated 3 ಡಿಸೆಂಬರ್ 2018, 16:58 IST
ಸಾದ್ ಅಲ್–ಖಾಬಿ
ಸಾದ್ ಅಲ್–ಖಾಬಿ   

ದುಬೈ: ಪೆಟ್ರೋಲಿಯಂ ರಫ್ತು ದೇಶಗಳ ಸಂಸ್ಥೆಯಿಂದ (ಒಪೆಕ್) ಹೊರಬರಲು ತೈಲ ಸಂಪದ್ಭರಿತ ದೇಶ ಕತಾರ್ ಸೋಮವಾರ ನಿರ್ಧರಿಸಿದೆ. ಸೌದಿ ಜೊತೆಗಿನ ಬಿಕ್ಕಟ್ಟಿನ ನಡುವೆಯೇ ತೈಲೋತ್ಪಾದನೆ ಹೆಚ್ಚಿಸಿಕೊಳ್ಳುವ ಹಲವು ಉದ್ದೇಶಗಳನ್ನಿಟ್ಟುಕೊಂಡು ಕತಾರ್ ಈ ನಿರ್ಧಾರ ತಳೆದಿದೆ.

ಕತಾರ್‌ನ ಇಂಧನ ವ್ಯವಹಾರಗಳ ಸಚಿವ ಸಾದ್ ಶರಿದಾ ಅಲ್–ಖಾಬಿ ಅವರ ಈ ಅಚ್ಚರಿ ಘೋಷಣೆಯು ದರ ನಿಯಂತ್ರಣ ಒಕ್ಕೂಟದ ಪಾತ್ರದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿದೆ. 1960ರಲ್ಲಿ ಸ್ಥಾಪನೆಯಾದಾಗಿನಿಂದ ಮಧ್ಯಪ್ರಾಚ್ಯದ ದೇಶದವೊಂದು ದರ ನಿಯಂತ್ರಣ ಒಕ್ಕೂಟದಿಂದ ಹೊರಬರುತ್ತಿರುವುದು ಇದೇ ಮೊದಲು.

ವಿಯೆನ್ನಾದಲ್ಲಿರುವ ಒಪೆಕ್ ಸಂಘಟನೆಯಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇದೇ ತಿಂಗಳಲ್ಲಿ ಸಭೆ ಸೇರಲಿರುವ ಸಂಘಟನೆಯು, ಉತ್ಪಾದನೆ ಕಡಿತಗೊಳಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆಸಲಿದೆ.

ADVERTISEMENT

‘ತೈಲ ಮಾರುಕಟ್ಟೆಯ ಮರು ಸಮತೋಲನಕ್ಕೆ ಒಪೆಕ್ ಹಾಗೂ ಇತರ ತೈಲ ಉತ್ಪಾದಕ ರಾಷ್ಟ್ರಗಳು ನಿತ್ಯ 10 ಲಕ್ಷ ಬ್ಯಾರಲ್‌ನಷ್ಟು ತೈಲ ಪೂರೈಕೆಯನ್ನು ಕಡಿತಗೊಳಿಸುವ ಅಗತ್ಯವಿದೆ’ ಎಂದು ಸೌದಿ ಇಂಧನ ಸಚಿವ ಖಾಲಿದ್ ಅವರು ಕಳೆದ ತಿಂಗಳು ಹೇಳಿದ್ದರು.

ಬಹರೇನ್, ಈಜಿಪ್ಟ್, ಸೌದಿ ಅರೇಬಿಯಾ ಹಾಗೂ ಯುಎಇ ದೇಶಗಳು 2017ರ ಜೂನ್‌ನಲ್ಲಿ ರಾಜಕೀಯ ಕಾರಣಗಳಿಗಾಗಿ ಕತಾರ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿವೆ. ಈ ಪುಟ್ಟ ರಾಷ್ಟ್ರದ ಮೇಲೆ ಆರ್ಥಿಕ ದಿಗ್ಬಂಧನವನ್ನೂ ಹೇರಿವೆ.

ಇರಾನ್ ಜೊತೆಗಿನ ಕತಾರ್ ನಂಟು ಕೂಡಾ ಈ ರಾಷ್ಟ್ರಗಳನ್ನು ಕೆರಳಿಸಿದೆ. ಉಗ್ರಗಾಮಿ ಸಂಘಟನೆಗಳ ಜೊತೆ ನಂಟು ಇದೆ ಎಂಬ ಆರೋಪಗಳನ್ನು ಕತಾರ್ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.