ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕಳೆದ 24 ಗಂಟೆಗಳಲ್ಲಿ 30 ಜನ ಮೃತಪಟ್ಟಿದ್ದಾರೆ. ಹೀಗಾಗಿ ಪ್ರಾಂತೀಯ ಸರ್ಕಾರ ಹಲವೆಡೆ ಮಳೆ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಂಜಾಬ್‌ನ ಚಕ್ವಾಲ್ ಪ್ರದೇಶ ಮಳೆಯಿಂದ ತೀವ್ರ ಹಾನಿಗೊಳಗಾಗಿದೆ. 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ 423 ಮಿ.ಮೀ. ಮಳೆಯಾಗಿದ್ದು, ಪ್ರವಾಹ ಉಂಟಾಗಿದೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಕ್ವಾಲ್‌ನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನೂ ಹೆಚ್ಚಿನ ಪ್ರದೇಶಗಳಿಗೆ ಮಳೆ ಆವರಿಸುವ ಮುನ್ಸೂಚನೆ ಇದ್ದು, ಪಂಜಾಬ್ ಪ್ರಾಂತ್ಯದಾದ್ಯಂತ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ದೇಶದಾದ್ಯಂತ ಮಳೆ ಸಂಬಂಧಿತ ಅವಘಡಗಳಲ್ಲಿ ಈವರೆಗೆ 170 ಜನ ಸಾವಿಗೀಡಾಗಿದ್ದಾರೆ. ಗುರುವಾರವೂ ಪ್ರಾಂತ್ಯದಾದ್ಯಂತ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಪಂಜಾಬ್‌ನಾದ್ಯಂತ ನದಿಗಳು ಮತ್ತು ತೊರೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.