ADVERTISEMENT

ರಾಣಾಗೆ ಜಾಮೀನು: ಅಮೆರಿಕ–ಭಾರತ ಸಂಬಂಧದ ಮೇಲೆ ಪರಿಣಾಮ

ಪಿಟಿಐ
Published 21 ಜೂನ್ 2020, 13:52 IST
Last Updated 21 ಜೂನ್ 2020, 13:52 IST
ರಾಣಾ
ರಾಣಾ   

ವಾಷಿಂಗ್ಟನ್‌:2008ರ ಮುಂಬೈ ದಾಳಿಯಲ್ಲಿ ಕೈವಾಡವಿರುವ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವ್ವುರ್ ರಾಣಾನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಭಾರತದ ಜೊತೆಗಿನ ಸಂಬಂಧ ಬಿಗಡಾಯಿಸುತ್ತದೆ ಎಂದುಅಮೆರಿಕದ ಸಹಾಯಕ ಅಟಾರ್ನಿ ಜಾನ್‌ ಜೆ. ಲುಲೆಜಿಯಾನ್‌ ಹೇಳಿದ್ದಾರೆ.

‘ರಾಣಾಗೆ ಜಾಮೀನು ನೀಡಿದರೆ, ಆತ ಕೆನಡಾಕ್ಕೆ ಪಲಾಯನ ಮಾಡುವ ಸಾಧ್ಯತೆ ಇದೆ. ಭಾರತಕ್ಕೆ ಹಸ್ತಾಂತರಿಸುವುದೂ ಕಷ್ಟವಾಗಲಿದೆ. ಅಲ್ಲಿ ಮರಣದಂಡನೆ ವಿಧಿಸುವ ಸಾಧ್ಯತೆಯಿಂದಲೂ ಆತ ತಪ್ಪಿಸಿಕೊಳ್ಳಬಹುದು. ಅಲ್ಲದೇ, ಅಮೆರಿಕವೂ ಮುಜುಗರಕ್ಕೀಡಾಗಬಹುದು. ಇದರಿಂದ ಭಾರತದ ಜೊತೆಗಿನ ಸಂಬಂಧವೂ ಹಳಸಬಹುದು’ ಎಂದುಲಾಸ್ ಏಂಜಲೀಸ್‌ನ ಫೆಡರಲ್‌ ನ್ಯಾಯಾಲಯಕ್ಕೆ ಅವರು ಕಳೆದ ವಾರ ತಿಳಿಸಿದ್ದಾರೆ.

ಆದ್ದರಿಂದ, ಯಾವುದೇ ಕಾರಣಕ್ಕೂ ರಾಣಾಗೆ ಜಾಮೀನು ನೀಡಬಾರದು ಎಂದು ಅವರು ವಾದ ಮಂಡಿಸಿದ್ದಾರೆ.

ADVERTISEMENT

ಮುಂಬೈ ದಾಳಿಯಲ್ಲಿ ಅಮೆರಿಕದ ಆರು ಪ್ರಜೆಗಳು ಸೇರಿದಂತೆ166 ಮಂದಿ ಮೃತಪಟ್ಟಿದ್ದರು. 59 ವರ್ಷದ ರಾಣಾ, ಮುಂಬೈ ದಾಳಿಯ ರೂವಾರಿ ಡೇವಿಡ್‌ ಕೋಲ್‌ಮೆನ್‌ ಹೆಡ್ಲಿಯ ಬಾಲ್ಯದ ಗೆಳೆಯ.ಕೋವಿಡ್–19 ದೃಢಪಟ್ಟಿದೆ ಎಂದು ರಾಣಾ ತಿಳಿಸಿದ್ದರಿಂದ, ಸಹಾನುಭೂತಿ ನೆಲೆಯಲ್ಲಿ ಆತನನ್ನು ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಘೋಷಿತ ಅಪರಾಧಿ ರಾಣಾನನ್ನು ವಶಕ್ಕೆ ನೀಡುವಂತೆ ಭಾರತ ಬೇಡಿಕೆ ಇಟ್ಟಿದ್ದರಿಂದ ಆತನನ್ನು ಮರಳಿ ವಶಕ್ಕೆ ಪಡೆಯಲಾಗಿದೆ. ಜೂನ್ 22ರೊಳಗೆ ಅರ್ಜಿ ಸಲ್ಲಿಸುವಂತೆ ರಾಣಾ ಪರ ವಕೀಲರಿಗೆ ಸೂಚಿಸಲಾಗಿದೆ. 26ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಲು ಸರ್ಕಾರಕ್ಕೆ ತಿಳಿಸಲಾಗಿದೆ.

ಲಷ್ಕರ್‌ ಇ ತೈಬಾ ಹಾಗೂ ಹರಾಕತ್‌ ಉಲ್‌–ಜಿಹಾದ್‌ ಇ ಇಸ್ಲಾಮಿ ಉಗ್ರಗಾಮಿ ಸಂಘಟನೆಗಳ ಜೊತೆಗೂಡಿ ಹೆಡ್ಲಿ ಹಾಗೂ ರಾಣಾ, 2006 ರಿಂದ 2008 ನವೆಂಬರ್‌ ನಡುವೆ ಮುಂಬೈ ದಾಳಿ ರೂಪುರೇಷೆ ಸಿದ್ಧಪಡಿಸಿದ್ದರು.

ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಹೆಡ್ಲಿ, ಪ್ರಸ್ತುತ ಅಮೆರಿಕದಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಭಾರತದಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ 2009ರ ಅಕ್ಟೋಬರ್‌ 18ರಂದು ಷಿಕಾಗೊದಲ್ಲಿ ರಾಣಾನನ್ನು ಬಂಧಿಸಲಾಗಿತ್ತು. ಇಲಿನಾಯ್‌ ಜಿಲ್ಲಾ ನ್ಯಾಯಾಲಯವು ರಾಣಾಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.