ADVERTISEMENT

ಕೋವಿಡ್‌ 19 ಪರಿಹಾರೋಪಾಯದ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿರುದ್ಧ ಅಸಮಾಧಾನ

ಕೋವಿಡ್‌–19 ಪರಿಹಾರೋಪಾಯ ರೂಪಿಸದಿರುವುದಕ್ಕೆ ವಿಶ್ವಸಂಸ್ಥೆಯ ರಾಯಭಾರಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 1:32 IST
Last Updated 28 ಮಾರ್ಚ್ 2020, 1:32 IST
ವಿಶ್ವಸಂಸ್ಥೆ
ವಿಶ್ವಸಂಸ್ಥೆ   

ವಿಶ್ವಸಂಸ್ಥೆ (ಪಿಟಿಐ): ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇದುವರೆಗೆಯಾವುದೇ ಸಭೆ ಕರೆದಿಲ್ಲ ಮತ್ತು ಪರಿಹಾರೋಪಾಯಗಳನ್ನು ರೂಪಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಮಂಡಳಿಯ ಈ ಧೋರಣೆಗೆ ವಿಶ್ವಸಂಸ್ಥೆಯ ರಾಯಭಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ತಿಂಗಳು ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಹೊಂದಿದ್ದು, ಮಾರ್ಚ್‌ 31ರಂದು ಅಂತ್ಯಗೊಳ್ಳಲಿದೆ.

‘15 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ವಿಶ್ವದ ಬಲಿಷ್ಠ ಸಂಸ್ಥೆ, ನಮ್ಮ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿಲ್ಲ’ ಎಂದು ರಾಯಭಾರಿಗಳು ಕಿಡಿಕಾರಿದ್ದಾರೆ.

ADVERTISEMENT

ಕೊರೊನಾ ಸೋಂಕು ವಿಶ್ವದ ವಿವಿಧ ದೇಶಗಳ ಜನರ ಆರೋಗ್ಯ, ಸುರಕ್ಷತೆ ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದರೂ ಈ ಬಗ್ಗೆ ಚರ್ಚಿಸಲು ಯಾವುದೇ ಸಭೆ ಕರೆದಿಲ್ಲ.‘ನಾಗರಿಕರ ಸುರಕ್ಷತೆ ಮತ್ತು ಜನಜೀವನದ ಮೇಲೆಆಳವಾಗಿ ಪರಿಣಾಮ ಬೀರಿರುವ ವಿಷಯದ ಬಗ್ಗೆ ಮೌನವಾಗಿರುವುದು ನೋಡಿದರೆ,ಈಗ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಶಕ್ತವಾಗಿಲ್ಲ ಎಂಬುದು ಸಾಬೀತಾಗುತ್ತದೆ’ ಎಂದು ವಿಶ್ವಸಂಸ್ಥೆ ರಾಯಭಾರಿ ತಿಳಿಸಿದ್ದಾರೆ.

ಲಿಬಿಯಾಗೆ ವಿಶ್ವಸಂಸ್ಥೆಯ ಸಹಾಯ ಕುರಿತಂತೆ ಭದ್ರತಾ ಮಂಡಳಿಯು ಗುರುವಾರ ವಿಶ್ವಸಂಸ್ಥೆಯಲ್ಲಿ ಚೀನಾದ ರಾಯಭಾರಿ ಝಾಂಗ್‌ ಜುನ್‌ ನೇತೃತ್ವದಲ್ಲಿ ವಿಡಿಯೊ ಸಂವಾದ ನಡೆಸಿತು. ಲಿಬಿಯಾದಲ್ಲಿ ಕೋವಿಡ್‌–19 ಪರಿಣಾಮದ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಲಿಬಿಯಾದಲ್ಲಿ ಸಂಘರ್ಷ ಶಮನಗೊಳಿಸಿ, ಕೊರೊನಾ ಸೋಂಕು ಹರಡದಿರುವ ನಿಟ್ಟಿನಲ್ಲಿ ಮಾನವೀಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿರ್ಧಾರ ಕೈಗೊಳ್ಳಲಾಯಿತು.ವಿಶ್ವಸಂಸ್ಥೆಯ ಚೀನಾ ಮಿಷನ್‌ ಈ ಕುರಿತು ಟ್ವೀಟ್‌ ಮಾಡಿದ್ದು, ‘ಕೋವಿಡ್‌–19 ನಮಗೆಲ್ಲ ಸಮಾನ ಶತ್ರು. ಚೀನಾ ಕೂಡ ಕೊರೊನಾದಿಂದ ಸಾಕಷ್ಟು ಸಂಕಷ್ಟ ಅನುಭವಿಸಿದೆ. ಈ ಸೋಂಕು ಇನ್ನೂ ಹೆಚ್ಚು ಹರಡದಂತೆ ಚೀನಾ ಕ್ರಮ ಕೈಗೊಂಡಿದ್ದು, ಬೇರೆ ದೇಶಗಳಿಗೂ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಿದೆ. ಈ ವಿಷಯದಲ್ಲಿ ಯಾವುದೇ ತಾರತಮ್ಯ, ರಾಜಕೀಯವನ್ನು ಚೀನಾ ಮಾಡುವುದಿಲ್ಲ’ ಎಂದಿದೆ.

ಇಲ್ಲಿಯವರೆಗೆ, ವಿಶ್ವದಾದ್ಯಂತ ಇರುವ ವಿಶ್ವಸಂಸ್ಥೆಯ 78 ಸಿಬ್ಬಂದಿಗೆ ಸೋಂಕು ದೃಢಪಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.