ADVERTISEMENT

ಶ್ರೀಲಂಕಾ: ಸಂವಿಧಾನ ತಿದ್ದುಪಡಿಗೆ ಕೆಲ ಪಕ್ಷಗಳಿಂದಲೇ ವಿರೋಧ

21ನೇ ತಿದ್ದುಪಡಿಯಿಂದ ಅಧ್ಯಕ್ಷರ ಅಧಿಕಾರ ಮೊಟಕು

ಪಿಟಿಐ
Published 1 ಜೂನ್ 2022, 11:31 IST
Last Updated 1 ಜೂನ್ 2022, 11:31 IST
ಶ್ರೀಲಂಕಾ ಸಂಸತ್‌ ಕಟ್ಟಡ –ಎಎಫ್‌ಪಿ ಚಿತ್ರ
ಶ್ರೀಲಂಕಾ ಸಂಸತ್‌ ಕಟ್ಟಡ –ಎಎಫ್‌ಪಿ ಚಿತ್ರ   

ಕೊಲಂಬೊ: ಅಧ್ಯಕ್ಷರ ಅಧಿಕಾರವನ್ನು ಮೊಟುಕುಗೊಳಿಸಿ, ಆಡಳಿತದಲ್ಲಿ ಸಂಸತ್ತಿನ ಪಾತ್ರವನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಸಂವಿಧಾನದ 21ನೇ ತಿದ್ದುಪಡಿಗೆ ಮೈತ್ರಿಕೂಟದ ಕೆಲ ಅಂಗಪಕ್ಷಗಳಿಂದಲೇ ವಿರೋಧ ವ್ಯಕ್ತವಾಗಿದೆ.

ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ನೆರವಾಗಲಿರುವ ಈ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಬೇಕು ಎಂಬ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ಪ್ರಯತ್ನಕ್ಕೆ ಆರಂಭದಲ್ಲಿಯೇ ಪ್ರತಿರೋಧ ವ್ಯಕ್ತವಾಗಿದೆ ಎಂದು ಮೂಲಗಳು ಬುಧವಾರ ಹೇಳಿವೆ.

ರಾಜಪಕ್ಸ ಕುಟುಂಬಗಳಿಗೆ ನಿಷ್ಠರಿಂದಲೇಉದ್ದೇಶಿತ ತಿದ್ದುಪಡಿಗೆ ಪ್ರತಿರೋಧ ವ್ಯಕ್ತವಾಗಿದೆ. ಅದರಲ್ಲೂ, ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಬೆಂಬಲಿಗರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ADVERTISEMENT

ಸೋಮವಾರ ನಡೆದ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ ಪಕ್ಷದ (ಎಸ್‌ಎಲ್‌ಪಿಪಿ) ಸಂಸದರ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಗೊಟಬಯ ರಾಜಪಕ್ಸ, ‘ಸಂವಿಧಾನಕ್ಕೆ 21ನೇ ತಿದ್ದುಪಡಿ ತರುವುದನ್ನು ತನ್ನ ಬೆಂಬಲ ಇದೆ’ ಎಂಬುದಾಗಿ ಹೇಳಿದ್ದರು.

‘ಸಾಂವಿಧಾನಿಕ ಸುಧಾರಣಾ ಕ್ರಮಗಳಿಗಿಂತ, ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಜನರಿಗೆ ನೆರವು ನೀಡುವುದೇ ಮುಖ್ಯ’ ಎಂದು ಬಸಿಲ್ ರಾಜಪಕ್ಸ ನಿಷ್ಠ ಸಂಸದರು ಹೇಳುವ ಮೂಲಕ, ಉದ್ದೇಶಿತ ತಿದ್ದುಪಡಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.