ಮಾಸ್ಕೋ: ‘ಉಕ್ರೇನ್ ಜತೆಗೆ ಶಾಂತಿ ಮಾತುಕತೆ ನಡೆಸಲು ನಾವು ಸಿದ್ಧರಾಗಿದ್ದೇವೆ. ಆದರೆ, ನಮ್ಮ ಗುರಿ ತಲುಪುವುದೇ ನಮ್ಮ ಪ್ರಥಮ ಆದ್ಯತೆ’ ಎಂದು ರಷ್ಯಾ ಭಾನುವಾರ ತಿಳಿಸಿದೆ.
ರಷ್ಯಾ–ಉಕ್ರೇನ್ ನಡುವಿನ ಶಾಂತಿ ಮಾತುಕತೆ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಹೇಳಿಕೆ ನೀಡಿದ್ದಾರೆ.
‘ಉಕ್ರೇನ್ ಜತೆಗಿನ ಸಮಸ್ಯೆಯನ್ನು ಶಾಂತಿ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಅಧ್ಯಕ್ಷ ಪುಟಿನ್ ಬಯಸಿದ್ದಾರೆ. ಆದರೆ, ಇದು ದೀರ್ಘಕಾಲದ ಪ್ರಕ್ರಿಯೆಯಾಗಿದ್ದು, ಸುಲಭವಾದುದಲ್ಲ. ನಮ್ಮ ಮೊದಲ ಆದ್ಯತೆ ನಮ್ಮ ಗುರಿ ಈಡೇರುವುದಾಗಿದೆ ಹಾಗೂ ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ’ ಎಂದೂ ಹೇಳಿದ್ದಾರೆ.
2022ರ ಸೆಪ್ಟೆಂಬರ್‌ನಲ್ಲಿ ರಷ್ಯಾ ಅತಿಕ್ರಮಿಸಿರುವ ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಉಕ್ರೇನ್ ಸಂಪೂರ್ಣವಾಗಿ ಬಿಟ್ಟುಕೊಡುವುದು, ನ್ಯಾಟೋ ಜತೆಗೆ ಸೇರುವ ಪ್ರಸ್ತಾವವನ್ನು ಹಿಂಪಡೆಯುವುದು ಹಾಗೂ ಉಕ್ರೇನ್ ಸೇನೆ ಮೇಲೆ ರಷ್ಯಾದ ಹಿಡಿತವನ್ನು ಒಪ್ಪಿಕೊಳ್ಳುವಂತೆ ಮಾಡುವುದು ರಷ್ಯಾದ ಗುರಿಯಾಗಿದೆ. ಆದರೆ, ಉಕ್ರೇನ್ ಈ ಪ್ರಸ್ತಾವಗಳನ್ನು ತಿರಸ್ಕರಿಸಿದೆ.
50 ದಿನಗಳ ಒಳಗೆ ಉಕ್ರೇನ್ ಜತೆಗೆ ರಷ್ಯಾ ಕದನವಿರಾಮ ಒಪ್ಪಂದ ಮಾಡಿಕೊಳ್ಳಬೇಕು. ತಪ್ಪಿದರೆ ರಷ್ಯಾದ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.