ADVERTISEMENT

ಉಕ್ರೇನ್ ರಾಜಧಾನಿ ಕೀವ್ ಸನಿಹ 40 ಮೈಲಿ ಉದ್ದಕ್ಕೂ ಬೀಡುಬಿಟ್ಟಿದೆ ರಷ್ಯಾ ಸೇನೆ

ಏಜೆನ್ಸೀಸ್
Published 1 ಮಾರ್ಚ್ 2022, 6:39 IST
Last Updated 1 ಮಾರ್ಚ್ 2022, 6:39 IST
ಉಪಗ್ರಹ ಚಿತ್ರ (ಚಿತ್ರ ಕೃಪೆ – ಮ್ಯಾಕ್ಸರ್ ಟೆಕ್ನಾಲಜೀಸ್/ ಎಎಫ್‌ಪಿ)
ಉಪಗ್ರಹ ಚಿತ್ರ (ಚಿತ್ರ ಕೃಪೆ – ಮ್ಯಾಕ್ಸರ್ ಟೆಕ್ನಾಲಜೀಸ್/ ಎಎಫ್‌ಪಿ)   

ಕೀವ್: ಉಕ್ರೇನ್‌ ರಾಜಧಾನಿ ಕೀವ್‌ನಿಂದ ಉತ್ತರಕ್ಕೆ 40 ಮೈಲಿಯಷ್ಟು ದೂರದವರೆಗೆ ರಷ್ಯಾ ಪಡೆಗಳು ಬೀಡುಬಿಟ್ಟಿರುವುದು ಅಮೆರಿಕದ ‘ಮ್ಯಾಕ್ಸರ್ ಟೆಕ್ನಾಲಜೀಸ್’ ಕಂಪನಿಯ ಉಪಗ್ರಹ ಚಿತ್ರದಿಂದ ತಿಳಿದುಬಂದಿದೆ.

ರಷ್ಯಾ ಪಡೆಗಳು ಕೀವ್‌ನಿಂದ ಉತ್ತರಕ್ಕೆ 17 ಮೈಲಿ ದೂರದಿಂದ ಸುಮಾರು 40 ಮೈಲಿವರೆಗೆ ವ್ಯಾಪಿಸಿವೆ. ಶಸ್ತ್ರಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಫಿರಂಗಿ, ಬೆಂಗಾವಲು ವಾಹನಗಳು ಇದರಲ್ಲಿ ಸೇರಿವೆ.

ದಕ್ಷಿಣ ಬೆಲರೂಸ್‌ನಲ್ಲಿ ಯುದ್ಧ ಹೆಲಿಕಾಪ್ಟರ್‌ಗಳನ್ನು ಮತ್ತು ಭೂಸೇನೆಯನ್ನು ನಿಯೋಜಿಸಿರುವುದೂ ಉಪಗ್ರಹ ಚಿತ್ರದಿಂದ ಗೊತ್ತಾಗಿದೆ.

ADVERTISEMENT

ಈ ಮಧ್ಯೆ, ಉಕ್ರೇನ್‌ನ ನಗರ ಹಾರ್ಕಿವ್ ಮೇಲೆ ಮಂಗಳವಾರ ಬೆಳಿಗ್ಗೆ ರಷ್ಯಾ ಶೆಲ್ ದಾಳಿ ನಡೆಸಿದೆ. ಎರಡೂ ದೇಶಗಳ ನಡುವೆ ಸೋಮವಾರ ನಡೆದ ಮಾತುಕತೆ ಫಲಪ್ರದವಾಗಿಲ್ಲ. ಇದರ ಬೆನ್ನಲ್ಲೇ ರಷ್ಯಾ ದಾಳಿ ಮುಂದುವರಿಸಿದೆ. ರಷ್ಯಾ ವಿರುದ್ಧ ಅಂತರರಾಷ್ಟ್ರೀಯ ಸಮುದಾಯದಿಂದ ಕಠಿಣ ನಿರ್ಬಂಧ ಕ್ರಮಗಳು ಮುಂದುವರಿದಿವೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದೆ. ಈ ವರ್ಷ ಕತಾರ್‌ನಲ್ಲಿ ಆಯೋಜನೆಯಾಗಲಿರುವ ವಿಶ್ವಕಪ್‌ ಟೂರ್ನಿಗೆ ನಡೆಯುವ ಅರ್ಹತಾ ಪಂದ್ಯಗಳಿಂದಲೂ ರಷ್ಯಾದ ತಂಡಗಳನ್ನು ಬಹಿಷ್ಕರಿಸಲಾಗಿದೆ. ರಷ್ಯಾ ಹಾಗೂ ಅದರ ಮಿತ್ರ ರಾಷ್ಟ್ರ ಬೆಲರೂಸ್‌ ಅನ್ನು ಅಂತರರಾಷ್ಟ್ರೀಯ ರಗ್ಬಿ ಕ್ರೀಡೆಯಿಂದ ಅಮಾನತು ಮಾಡಲಾಗಿದೆ ಎಂದು ವಿಶ್ವ ರಗ್ಬಿ ಒಕ್ಕೂಟ (ವರ್ಲ್ಡ್‌ ರಗ್ಬಿ) ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.