ADVERTISEMENT

ರಷ್ಯಾ–ಉಕ್ರೇನ್ ಸಂಘರ್ಷ: ಬುಕಾದಲ್ಲಿ 410 ನಾಗರಿಕರ ಹತ್ಯೆ

ಏಜೆನ್ಸೀಸ್
Published 3 ಏಪ್ರಿಲ್ 2022, 19:53 IST
Last Updated 3 ಏಪ್ರಿಲ್ 2022, 19:53 IST
ಬುಕಾ ಪಟ್ಟಣ ತೊರೆಯುವ ಮೊದಲು ರಷ್ಯಾ ಸೈನಿಕರು ರಸ್ತೆಗಳಲ್ಲಿ ನಾಗರಿಕರ ಕೈಗಳನ್ನು ಹಿಂದಕ್ಕೆ ಕಟ್ಟಿ ತಲೆಯ ಹಿಂಬದಿಗೆ ಗುಂಡು ಹಾರಿಸಿ ಸಾಮೂಹಿಕ ನರಮೇಧ ನಡೆಸಿರುವ ಕೃತ್ಯದ ಚಿತ್ರವನ್ನು ಉಕ್ರೇನ್‌ ಉಪಪ್ರಧಾನಿ ಮಿಖಾಯಿಲೊ ಪೆಡರೊವ್‌ ಭಾನುವಾರ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ
ಬುಕಾ ಪಟ್ಟಣ ತೊರೆಯುವ ಮೊದಲು ರಷ್ಯಾ ಸೈನಿಕರು ರಸ್ತೆಗಳಲ್ಲಿ ನಾಗರಿಕರ ಕೈಗಳನ್ನು ಹಿಂದಕ್ಕೆ ಕಟ್ಟಿ ತಲೆಯ ಹಿಂಬದಿಗೆ ಗುಂಡು ಹಾರಿಸಿ ಸಾಮೂಹಿಕ ನರಮೇಧ ನಡೆಸಿರುವ ಕೃತ್ಯದ ಚಿತ್ರವನ್ನು ಉಕ್ರೇನ್‌ ಉಪಪ್ರಧಾನಿ ಮಿಖಾಯಿಲೊ ಪೆಡರೊವ್‌ ಭಾನುವಾರ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ    

ಕೀವ್‌: ರಷ್ಯಾ ಪಡೆಗಳು ಆಕ್ರಮಿಸಿದ್ದ ಸ್ಥಳಗಳನ್ನು ತೊರೆಯುವಾಗ ಕೀವ್‌ ಹೊರ ವಲಯದ ನಗರಗಳಲ್ಲಿ ಸಿಕ್ಕಸಿಕ್ಕ ನಾಗರಿಕರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಒಂದೇ ಕಡೆ ಸುಮಾರು 300 ನಾಗರಿಕರನ್ನು ಸಾಮೂಹಿಕವಾಗಿ ಸಮಾಧಿ ಮಾಡಿರುವುದು ಕಂಡುಬಂದಿದೆ.

ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ರಷ್ಯಾದ ಆಕ್ರಮಣಕ್ಕೆ ಸಿಲುಕಿದ್ದ ಕೀವ್‌ ಹೊರವಲಯದ ಉಪನಗರ ಬುಕಾ ಪಟ್ಟಣವೊಂದರಲ್ಲೇ ಬೀದಿ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಾಗರಿಕರು ಹೆಣವಾಗಿದ್ದಾರೆ. 300 ನಾಗರಿಕರ ಸಾಮೂಹಿಕ ಸಮಾಧಿ ಕಂಡುಬಂದಿದೆ. ಈ ಎಲ್ಲರ ಕೈಗಳನ್ನು ಹಿಂದಕ್ಕೆ ಕಟ್ಟಿ, ತಲೆಯ ಹಿಂಭಾಗಕ್ಕೆ ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಬುಕಾ ನಗರದ ಮೇಯರ್‌ ಅನಟೊಲಿ ಫೆಡೊರುಕ್‌ ಭಾನುವಾರ ತಿಳಿಸಿದ್ದಾರೆ.

ಬುಕಾದ ಒಂದೇ ಬೀದಿಯಲ್ಲಿ ಕನಿಷ್ಠ 20 ನಾಗರಿಕರ ಶವಗಳು ಬಿದ್ದಿರುವುದನ್ನು ‘ಎಪಿಎಫ್‌’ ಸುದ್ದಿ ಸಂಸ್ಥೆಯ ಪ್ರತಿನಿಧಿ ಕಣ್ಣಾರೆ ಕಂಡಿದ್ದಾಗಿ ವರದಿಯಾಗಿದೆ.

ರಷ್ಯಾದ ಸೈನಿಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಅವರನ್ನು ಕೊಂದಿದ್ದಾರೆ. ಕೀವ್‌ ಹೊರವಲಯದಿಂದ 20 ಕಿ.ಮೀ. ದೂರದ ಹೆದ್ದಾರಿಯಲ್ಲಿಐವರು ಮಹಿಳೆಯರ ಶವಗಳು ಒಂದೆ ಕಡೆ ಬೆತ್ತಲೆಯ ಸ್ಥಿತಿಯಲ್ಲಿದ್ದು, ಶವಗಳಿಗೆ ಕಂಬಳಿ ಮುಚ್ಚಿ ಟೈರುಗಳಿಂದ ಸುಡಲು ಯತ್ನಿಸಿರುವ ಅನಾಗರಿಕ ಕೃತ್ಯಗಳು ನಡೆದಿವೆ.ಇರ್ಪಿನ್‌, ಬುಕಾ, ಹೋಸ್ತೊಮೆಲ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ನಿಶಸ್ತ್ರಧಾರಿ ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಬಿದ್ದಿರುವ ಹೆಣಗಳ ರಾಶಿ ‘ಹಾರಾರ್‌ ಸಿನಿಮಾ’ ನೋಡಿದಂತೆ ಭಾಸವಾಗುತ್ತಿದೆ ಎಂದು ಉಕ್ರೇನ್‌ ಅಧ್ಯಕ್ಷರ ಸಲಹೆಗಾರ ಒಲೆಕ್ಸಿ ಅರಿಸ್ಟೊವಿಕ್‌ ಹೇಳಿದ್ದಾರೆ.

ರಷ್ಯಾ ಪಡೆಗಳ ಆಕ್ರಮಣದ ಸ್ಥಳದಿಂದ ತಪ್ಪಿಸಿಕೊಳ್ಳಲು ಕಾರಿನಲ್ಲಿ ಹೋಗುತ್ತಿದ್ದ ಇಡೀ ಕುಟುಂಬಗಳನ್ನೇ ಗುಂಡಿಟ್ಟು ಸಾಯಿಸಿರುವ ಹೃದಯ ವಿದ್ರಾವಕ ಕೃತ್ಯಗಳೂ ನಡೆದಿವೆ. ಮಕ್ಕಳು, ಮಹಿಳೆಯರು, ಅಜ್ಜಿಯರ ಶವಗಳು ತುಂಬಿರುವ ಕಾರುಗಳು ಇನ್ನೂ ರಸ್ತೆಯಲ್ಲಿಅಲ್ಲಲ್ಲಿ ನಿಂತಿವೆ. ಸ್ವಯಂಸೇವಕರು ಇಲ್ಲದೇ, ಶವಗಳನ್ನು ಇನ್ನೂ ತೆರವುಗೊಳಿಸಲು ಸಾಧ್ಯವಾಗಿಲ್ಲ. ಉಕ್ರೇನ್‌ ನಿಯಂತ್ರಿತ ಪ್ರದೇಶ ತಲುಪಲುಬುಕಾಂಕಾ ನದಿ ದಾಟಲು ಪ್ರಯತ್ನಿಸಿದ ನಾಗರಿಕರು ರಷ್ಯಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಮೇಯರ್‌ ಅನಟೊಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.