ADVERTISEMENT

ಆಸ್ಪತ್ರೆಗೆ ದಾಖಲಾದ ಸೌದಿ ದೊರೆ

ಪಿತ್ತಕೋಶದ ಉರಿಯೂತಕ್ಕೆ ವೈದ್ಯಕೀಯ ತಪಾಸಣೆ

ಏಜೆನ್ಸೀಸ್
Published 20 ಜುಲೈ 2020, 8:36 IST
Last Updated 20 ಜುಲೈ 2020, 8:36 IST
ಸೌದಿ ಅರೇಬಿಯಾದ ದೊರೆ ಸಲ್ಮಾನ್
ಸೌದಿ ಅರೇಬಿಯಾದ ದೊರೆ ಸಲ್ಮಾನ್   

ದುಬೈ: ಸೌದಿ ಅರೇಬಿಯಾದ ದೊರೆ ಸಲ್ಮಾನ್‌ ಅವರನ್ನು ರಾಜಧಾನಿ ರಿಯಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿತ್ಥಕೋಶದ ಉರಿಯೂತಕ್ಕಾಗಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುವುದು.

ಸೌದಿ ಪ್ರೆಸ್‌ ಏಜನ್ಸಿ ಸೋಮವಾರ ಪ್ರಕಟಿಸಿರುವ ರಾಜಕುಟುಂಬದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದೆ. 84 ವರ್ಷದ ಸಲ್ಮಾನ್‌, ಕಿಂಗ್‌ ಫೈಸಲ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಬೇರೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

ರಾಜ ಅಬ್ದುಲ್ಲಜೀಜ್‌ ಮೃತಪಟ್ಟ ನಂತರ ಅಧಿಕಾರ ನಡೆಸಿದ ಸೋದರರ ತಲೆಮಾರಿನ ಪೈಕಿ ಸಲ್ಮಾನ್‌ ಅವರನ್ನು ಸೌದಿಯ ಕೊನೆಯ ರಾಜ ಎಂದು ಪರಿಗಣಿಸಲಾಗುತ್ತಿದೆ. ಸಲ್ಮಾನ್‌ ಅವರು ತಮ್ಮ 34 ವರ್ಷದ ಪುತ್ರ, ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಬೆಳೆಸಿದ್ದಾರೆ. ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ನಾಯಕತ್ವದ ಶೈಲಿ, ಅಧಿಕಾರದ ಕೇಂದ್ರೀಕರಣ, ರಾಜಕೀಯ ಎದುರಾಳಿಗಳನ್ನು ಮೂಲೆಗುಂಪು ಮಾಡುವ ರೀತಿ ವಿವಾದಾತ್ಮಕವಾಗಿದೆ.

ADVERTISEMENT

ತಂದೆಯ ಬೆಂಬಲದಿಂದ ಮೊಹಮ್ಮದ್‌ ಅವರು ಸೌದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸುಧಾರಣೆಗಳನ್ನು ತರುತ್ತಿದ್ದಾರೆ. ಸೌದಿಯನ್ನು ಪ್ರವಾಸಿಗಳಿಗೆ ಮುಕ್ತಗೊಳಿಸಲಾಗುತ್ತಿದೆ. ಮನರಂಜನಾ ಕ್ಷೇತ್ರದಲ್ಲಿದ್ದ ಸಾಂಪ್ರದಾಯಿಕ ಬಿಗಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ. ಮಹಿಳೆಯರ ಹಕ್ಕುಗಳ ಮೇಲಿನ ನಿರ್ಬಂಧಗಳನ್ನು ನಿಧಾನವಾಗಿ ತೆಗೆದುಹಾಕಲಾಗುತ್ತಿದೆ. ತೈಲ ರಫ್ತಿನ ಮೇಲಿನ ಅವಲಂಬನೆ ಕಡಿಮೆಮಾಡಲು ಸೌದಿ ಅರ್ಥಿಕತೆ ಇತರ ಕ್ಷೇತ್ರಗಳಿಗೆ ತೆರೆದುಕೊಳ್ಳುತ್ತಿದೆ.

ಇನ್ನೊಂದೆಡೆ ಟೀಕಾಕಾರರನ್ನು ಮತ್ತು ಹೋರಾಟಗಾರರನ್ನು ಬಂಧನದಲ್ಲಿರಿಸಲಾಗಿದೆ. ಅಧಿಕಾರ ಭದ್ರಪಡಿಸಿಕೊಳ್ಳಲು ರಾಜಕುಟುಂಬದ ಹಿರಿಯ ಸದಸ್ಯರನ್ನು ಅವರು ಮೂಲೆಗುಂಪು ಮಾಡಿದ್ದಾರೆ.

ಸಾಮಾಜಿಕ ಅಂತರದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸೌದಿಯ ದೊರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಧ್ಯಪ್ರಾಚ್ಯದಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಿದೆ. ಆದರೆ ಸಲ್ಮಾನ್‌ ಅವರು ತಮ್ಮ ಮಂತ್ರಿಗಳ ಜೊತೆ ಆನ್‌ಲೈನ್‌ನಲ್ಲಿ ಸಭೆಗಳನ್ನು ನಡೆಸುತ್ತಿರುವ ಚಿತ್ರಗಳು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.