ADVERTISEMENT

ಮಿಂಕ್‌ ಪ್ರಾಣಿಗಳಿಗೆ ಕೊರೊನಾ ಸೋಂಕು: ವಿಜ್ಞಾನಿಗಳ ಅಧ್ಯಯನ

ಏಜೆನ್ಸೀಸ್
Published 2 ಆಗಸ್ಟ್ 2020, 10:08 IST
Last Updated 2 ಆಗಸ್ಟ್ 2020, 10:08 IST
ಮಿಂಕ್‌ ಪ್ರಾಣಿ
ಮಿಂಕ್‌ ಪ್ರಾಣಿ   

ಮ್ಯಾಡ್ರಿಡ್‌: ಸ್ಪೇನ್ ಮತ್ತು ನೆದರ್ಲೆಂಡ್ಸ್ ಫಾರ್ಮ್‌ಗಳಲ್ಲಿನ ಮಿಂಕ್‌ ಪ್ರಾಣಿಗಳಿಗೆ ಕೊರೊನಾ ಸೋಂಕು ಹೇಗೆ ತಗುಲಿದೆ. ಈ ಸೋಂಕು ಪ್ರಾಣಿಗಳಿಂದ ಮಾನವನಿಗೆ ಹರಡುತ್ತದೆಯೇ ಎಂಬುದರ ಬಗ್ಗೆ ಇಲ್ಲಿನ‌ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದಾರೆ.

ಎರಡು ರಾಷ್ಟ್ರಗಳುಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 10 ಲಕ್ಷಕ್ಕಿಂತ ಹೆಚ್ಚು ಮಿಂಕ್‌ ಪ್ರಾಣಿಗಳನ್ನು ಹತ್ಯೆಗೈದಿವೆ.

ನೆದರ್ಲೆಂಡ್ಸ್‌ ಮತ್ತು ಸ್ಪೇನ್‌ನ ಮಿಂಕ್‌ ಪ್ರಾಣಿಗಳಿಗೆ ಅಲ್ಲಿನ ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತ ವ್ಯಕ್ತಿಗಳಿಂದ ವೈರಸ್ ತಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ.

ADVERTISEMENT

ಮಿಂಕ್‌ಗಳಿಂದಲೂ ಕೆಲಸಗಾರರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಸಂಶೋಧಕರು ಮತ್ತು ಸರ್ಕಾರ ಹೇಳಿದೆ. ಒಂದು ವೇಳೆ, ಈ ರೀತಿ ಹಬ್ಬಿದ್ದರೆ ಯಾವ ಪ್ರಮಾಣದಲ್ಲಿ ಸೋಂಕು ಹಬ್ಬಿದೆ ಎನ್ನುವ ಬಗ್ಗೆ ವಿಜ್ಞಾನಿಗಳು ವಿಶ್ಲೇಷಣೆ ನಡೆಸಿದ್ದಾರೆ.

ಮೇ ತಿಂಗಳಲ್ಲಿ ಸ್ಪೇನ್‌ನ ಮಿಂಕ್‌ ಫಾರ್ಮ್‌ವೊಂದರಲ್ಲಿ ಮಾಲೀಕ ಸೇರಿದಂತೆ 14 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಮಿಂಕ್‌ ಪ್ರಾಣಿಗಳಿಗೂ ಸೋಂಕು ತಗುಲಿರುವುದು ಬೆಳಕಿಗೆ ಬಂದಿತ್ತು.

ಈಶಾನ್ಯ ಸ್ಪೇನ್‌ನ ಅರಾಗನ್‌ ಪ್ರದೇಶದಲ್ಲಿ ಪ್ರತಿ 10 ಮಿಂಕ್‌ ಪ್ರಾಣಿಗಳಲ್ಲಿ 9ರಲ್ಲಿ ಕೊರೊನಾ ಸೋಂಕು ತಗುಲಿದೆ ಎಂಬ ಕಾರಣಕ್ಕೆ 92,000 ಕ್ಕೂ ಹೆಚ್ಚು ಪ್ರಾಣಿಗಳನ್ನು ಸಾಯಿಸುವಂತೆ ಅಲ್ಲಿನ ಸರ್ಕಾರ ಆದೇಶ ನೀಡಿತ್ತು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಮತ್ತು ಪ್ಯಾರಿಸ್‌ ಮೂಲದ ಪ್ರಾಣಿಗಳ ಆರೋಗ್ಯ ಕುರಿತ ವಿಶ್ವ ಸಂಘಟನೆಯು ಪ್ರಾಣಿಗಳು ಮತ್ತು ಮನುಷ್ಯರ ನಡುವೆ ವೈರಸ್‌ ಹರಡುತ್ತದೆಯೇ ಎನ್ನುವ ಕುರಿತು ಅಧ್ಯಯನ ಕೈಗೊಂಡಿವೆ. ಹಲವು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಹ ಈ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡಿವೆ.

‘ಮಿಂಕ್‌ಗಳಿಂದ ಮನುಷ್ಯರಿಗೆ ಸೋಂಕು ಹಬ್ಬಿರಬಹುದು ಅಥವಾ ಮನುಷ್ಯರಿಂದ ಮಿಂಕ್‌ಗಳಿಗೆ ಸೋಂಕು ಹರಡಿರಬಹುದು. ಈ ಎರಡು ಸಾಧ್ಯತೆಗಳಿವೆ’ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.