ವಾಷಿಂಗ್ಟನ್(ಎಪಿ): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ತೆರಿಗೆ ಭಾರ ಇಳಿಸುವ ಮತ್ತು ವೆಚ್ಚ ತಗ್ಗಿಸುವ ಕುರಿತ ಮಸೂದೆಗೆ ಅಮೆರಿಕ ಸೆನೆಟ್‌ನಲ್ಲಿ ಅಲ್ಪಮತಗಳ ಅಂತರದಿಂದ ಅನುಮೋದನೆ ಲಭಿಸಿದೆ.
ಮಂಗಳವಾರ ರಾತ್ರಿ ನಡೆದ ಅಧಿವೇಶನದಲ್ಲಿ ಬಿರುಸಿನ ಚರ್ಚೆಯ ಬಳಿಕ, ವಿರೋಧ ಪಕ್ಷವಾದ ಡೆಮಾಕ್ರಟಿಕ್‌ನ ಸಂಸದರ ವಿರೋಧದ ನಡುವೆ, ಮಸೂದೆಯನ್ನು ಅನುಮೋದಿಸಲಾಯಿತು.
ಬಿರುಸಿನ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಪರ ಮತ್ತು ವಿರೋಧವಾಗಿ 50 ಮತಗಳು ಚಲಾವಣೆಗೊಂಡಿದ್ದರಿಂದ, ಮಸೂದೆಗೆ ಅನುಮೋದನೆ ಸಿಗುವ ಕುರಿತು ಅನಿಶ್ಚಿತತೆ ಮನೆಮಾಡಿತ್ತು. ಕೊನೆಗೆ, ಉಪಾಧ್ಯಕ್ಷರಾದ ಜೆ.ಡಿ.ವ್ಯಾನ್ಸ್ ಸರ್ಕಾರದ ನೆರವಿಗೆ ಬಂದರು. ಅವರು, ಮಸೂದೆ ಪರವಾಗಿ ಮತ ಚಲಾಯಿಸಿದ್ದರಿಂದ ಅನುಮೋದನೆಗೆ ಎದುರಾಗಿದ್ದ ಅಡ್ಡಿ ನಿವಾರಣೆಯಾಯಿತು.
‘ಅಂತಿಮವಾಗಿ ನಮ್ಮ ಉದ್ಧೇಶವನ್ನು ನಾವು ಕಾರ್ಯಗತಗೊಳಿಸಿದೆವು’ ಎಂದು ಸೌತ್ ಡಕೋಟಾ ಸಂಸದ ಹಾಗೂ ಸೆನಟ್‌ನಲ್ಲಿ ರಿಪಬ್ಲಿಕನ್ ಪಕ್ಷದ ಸದನ ನಾಯಕ ಜಾನ್ ಟಿ. ಅವರು ಘೋಷಿಸಿದರು.
ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳಾದ ಥಾಮ್ ಟಿಲ್ಲಿಸ್, ಸೂಸನ್ ಕಾಲಿನ್ಸ್ ಹಾಗೂ ರ‍್ಯಾಂಡ್ ಪೌಲ್ ಅವರು ಮಸೂದೆಗೆ ವಿರೋಧ ವ್ಯಕ್ತಪಡಿಸಿ, ಮಸೂದೆ ವಿರುದ್ಧ ಮತ ಚಲಾಯಿಸಿ ಅಚ್ಚರಿಗೆ ಕಾರಣರಾದರು.
ಈ ಮಸೂದೆಗೆ ‘ಪ್ರತಿನಿಧಿಗಳ ಸಭೆ’ಯಲ್ಲಿ ಮೇನಲ್ಲಿ ಅನುಮೋದನೆ ಸಿಕ್ಕಿದೆ.
ಮಸೂದೆಗೆ ಸೆನೆಟ್‌ನಲ್ಲಿ ಅನುಮೋದನೆ ಲಭಿಸಿರುವ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ‘ಈ ವಿಚಾರ ಬಹಳ ಸಂಕೀರ್ಣವಾದುದು. ನನಗೆ ತೆರಿಗೆ ಮತ್ತು ವೆಚ್ಚಗಳನ್ನು ವಿಪರೀತ ಕಡಿತ ಮಾಡುವ ಇರಾದೆ ಇಲ್ಲ. ಅದನ್ನು ನಾನು ಬಯಸುವುದೂ ಇಲ್ಲ’ ಎಂದರು.
ಡೆಮಾಕ್ರಟಿಕ್ ಪಕ್ಷದ ವಿರೋಧ: ಈ ಮಸೂದೆಗೆ ಡೆಮಾಕ್ರಟಿಕ್ ಪಕ್ಷ ವಿರೋಧಿಸುತ್ತಲೇ ಬಂದಿದೆ.
‘ಮಧ್ಯಮ ವರ್ಗದವರ ಪಾಲಿಗೆ ಈ ಮಸೂದೆಯು ವಿನಾಶಕಾರಿಯಾಗಲಿದೆ. ಈ ಮಸೂದೆ ಕಾಯ್ದೆಯಾಗಿ ಜಾರಿಯಾದಲ್ಲಿ, ಕಡಿಮೆ ಆದಾಯದ ಅಮೆರಿಕ ಪ್ರಜೆಗಳ ಆರೋಗ್ಯ ವಿಮೆ ಸೌಲಭ್ಯವು ಕಡಿತಗೊಳ್ಳಲಿದೆ’ ಎಂದು ಹೇಳಿದೆ.
ಮಸೂದೆಯಲ್ಲಿನ ಈ ಅಂಶಗಳ ಕುರಿತು ಅಧ್ಯಕ್ಷ ಟ್ರಂಪ್ ಅವರ ಗಮನಕ್ಕೆ ಮತ್ತೊಮ್ಮೆ ತರಲಾಗುವುದು ಎಂದೂ ಟೆಮಾಕ್ರಟಿಕ್ ಪಕ್ಷದ ಸದಸ್ಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.