ADVERTISEMENT

ಚೀನಾ: ಕೋವಿಡ್‌ನಿಂದ ಹಿರಿಯ ನಾಗರಿಕರ ಸರಣಿ ಸಾವು

ಏಜೆನ್ಸೀಸ್
Published 9 ಏಪ್ರಿಲ್ 2022, 15:49 IST
Last Updated 9 ಏಪ್ರಿಲ್ 2022, 15:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ಕೊರೊನಾ ಸೋಂಕು ಹೆಚ್ಚಳದಿಂದಾಗಿ ಶಾಂಘೈ ನಗರದ ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿವೆ ಎಂದು ವರದಿಯಾಗಿದೆ.

ಶಾಂಘೈನಲ್ಲಿರುವ ಡೊಂಘೈ ಹಿರಿಯ ನಾಗರಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ಸಂಬಂಧಿಕರು ಸಿಬ್ಬಂದಿ ಕೊರತೆಯಿಂದ ಸೂಕ್ತ ಚಿಕಿತ್ಸೆಯಿಲ್ಲದೆ ಸಾವಿಗೀಡಾಗಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲಿ ತಮ್ಮ ಪ್ರೀತಿ ಪಾತ್ರರ ಆರೋಗ್ಯ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಕೋವಿಡ್‌ ಸೋಂಕಿಗೆ ತುತ್ತಾದರು. ಇದರಿಂದಾಗಿ ಸಿಬ್ಬಂದಿ ಸರ್ಕಾರದ ಕಠಿಣ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಲು ಕ್ವಾರಂಟೈನ್ ಆದರು. ಇದರ ಪರಿಣಾಮ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ ಎದುರಾಯಿತು. ಸೂಕ್ತ ಚಿಕಿತ್ಸೆ ಇಲ್ಲದೆ ತಮ್ಮ ಪ್ರೀತಿ ಪಾತ್ರರು ಬಲಿಯಾಗಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ. ಅಲ್ಲದೆ ಸೋಂಕಿಗೆ ತುತ್ತಾದ ಬಹುತೇಕ ಸಿಬ್ಬಂದಿಯಲ್ಲಿ ಸೌಮ್ಯ ಸೋಂಕಿನ ಲಕ್ಷಣ ಇದ್ದಾಗ್ಯೂ, ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಶಾಂಘೈನಲ್ಲಿ ಶೀಘ್ರ ಲಾಕ್‌ಡೌನ್ ತೆರವು:

ಕಳೆದ 14 ದಿನಗಳಿಂದ ಹೊಸ ಕೊರೊನಾ ಪ್ರಕರಣಗಳು ದೃಢಪಡದ ಚೀನಾದ ಅತಿದೊಡ್ಡ ಹಾಗೂ ವಾಣಿಜ್ಯ ರಾಜಧಾನಿ ಶಾಂಘೈ ನಗರದ ಭಾಗಗಳಲ್ಲಿ ಮತ್ತೊಂದು ಸುತ್ತಿನ ಸಾಮೂಹಿಕ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ಒಂದೊಂದೇ ನಗರದಲ್ಲಿ ಕೋವಿಡ್ ಲಾಕ್‌ಡೌನ್ ನಿರ್ಬಂಧಗಳನ್ನು ಹಿಂಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2.6 ಕೋಟಿ ಜನರನ್ನು ಒಳಗೊಂಡಿರುವ ಶಾಂಘೈನಲ್ಲಿ ಮಾರ್ಚ್ 28ರಿಂದ ಲಾಕ್‌ಡೌನ್ ಹೇರಲಾಗಿದೆ. ಇದರಿಂದಾಗಿ ನಗರದಲ್ಲಿ ಆಹಾರದ ಹಾಹಾಕಾರ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.